Belagavi News In Kannada | News Belgaum

40% ಕಮಿಷನ್‌ ತೆಗೆದುಕೊಳ್ಳುವ ರಾಜ್ಯ ಬಿಜೆಪಿ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬರಲ್ಲ: ರಣದೀಪಸಿಂಗ್ ಸುರ್ಜೆವಾಲಾ

ಬೆಂಗಳೂರು: ಗುತ್ತಿಗೆದಾರರಿಂದ, ಅಭಿವೃದ್ಧಿ ಕೆಲಸಗಳಲ್ಲಿ 40% ಕಮಿಷನ್‌ ತೆಗೆದುಕೊಳ್ಳುವ ರಾಜ್ಯ ಬಿಜೆಪಿ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದಿಂದ ಬಾರೀ  ಭ್ರಷ್ಟಾಚಾರ ನಡೆದರೂ ಪ್ರಧಾನಿ ಮೋದಿ ಏಕೆ ಸುಮ್ಮನೆ ಕುಳಿತ್ತಿದ್ದಾರೆ. ಏಕೆ ಧ್ವನಿ ಎತ್ತುತ್ತಿಲ್ಲ. ಸಿಬಿಐ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಮೋದಿ ಸರ್ಕಾರವೂ ಭ್ರಷ್ಟಾಚಾರದಲ್ಲಿ ಇಳಿದಿದೆ ಎಂದು ಆರೋಪಿಸಿದರು. 

ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್‌ ಖರ್ಗೆ ಮಾತನಾಡಿ, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡುತ್ತಿರುವ ಎಂ.ಬಿ. ಪಾಟೀಲ್‌ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಯಿಂದ ಬಂದಿದ್ದು, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಂ.ಬಿ. ಪಾಟೀಲ್‌ ಅವರು ಶ್ರಮಿಸಲಿ ಎಂದರು.

ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದ್ದು, ಹಳ್ಳಿ, ನಗರ ಪ್ರದೇಶದಲ್ಲಿಯೂ ನಿರುದ್ಯೋಗ ಹೆಚ್ಚಾಗಿದೆ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ 2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಇಂದು 2 ಲಕ್ಷ ಜನರಿಗೂ ಉದ್ಯೋಗ ಸಿಕ್ಕಿಲ್ಲ ಎಂದು ದೂರಿದರು.

ಹೊಸ ಉದ್ಯೋಗ ಸೃಷ್ಟಿಸುವ ಕೆಲಸಕ್ಕೆ ಕೇಂದು ಸರ್ಕಾರ ಮುಂದಾಗಲ್ಲ. ಆದರೆ ಖಾಲಿ ಇರುವ ಹುದ್ದೆಗಳನ್ನಾದರೂ ಭರ್ತಿ ಮಾಡಲಿ ಎಂದ ಅವರು, ದೇಶದ ಆಸ್ತಿಗಳನ್ನು ಮಾರಲು ಹೊರಟ ಮೋದಿ ಅವರಿಗೆ ಕಾಂಗ್ರೆಸ್‌ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಸಾರ್ವಜನಿಕ ಆಸ್ತಿಗಳನ್ನು ಮಾರಾಟ  ಮಾರುವುದೇ ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದೆ. ಇದನ್ನ ಜನ ಅರ್ಥಮಾಡಿಕೊಳ್ಳಬೇಕೆಂದು ಸಲಹೆ ನೀಡಿದ ಅವರು, ದೇಶಕ್ಕೆ ಇಂದಿರಾ ಗಾಂಧಿ ಅವರ ಕೊಡುಗೆ ಅಪಾರವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್‌ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್‌, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್‌, ಮಾಜಿ ಸಚಿವರಾದ ರಾಮಲಿಂಗರೆಡ್ಡಿ ಸೇರಿದಂತೆ ಮಾಜಿ ಸಚಿವರು, ಕಾಂಗ್ರೆಸ್‌ ಶಾಸಕರು, ಮಾಜಿ ಶಾಸಕರು ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು./////