Belagavi News In Kannada | News Belgaum

ಹಣ ಡಬಲ್ ಮಾಡಿಕೊಡುವುದಾಗಿ ಉದ್ಯಮಿಗೆ 30 ಲಕ್ಷ ರೂ. ಪಂಗನಾಮ

ಬೆಂಗಳೂರು: ಹಣ ದ್ವಿಗುಣಗೊಳಿಸಿಕೊಡುವುದಾಗಿ ಉದ್ಯಮಿಯೊಬ್ಬರಿಂದ 30 ಲಕ್ಷ ರೂ. ಪಡೆದು ನಾಲ್ವರು ಮೋಸ ಮಾಡಿದ್ದು, ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಮಂಗಳೂರಿನ ಕುದ್ರೋಳಿ ನಿವಾಸಿ ರಷೀದ್ ಲತೀಫ್ ಹಣ ಕಳೆದುಕೊಂಡ ಉದ್ಯಮಿ. ವಂಚಕರಾದ ಪ್ರಮುಖ ಆರೋಪಿ ಸಾಜಿದ್ ಸೇರಿದಂತೆ ರಾಜೀವ್, ಅಭಿಲಾಶ್ ಮತ್ತು ಸತ್ಯನ್‍ಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ರಷೀದ್ ಅವರಿಗೆ ಸಾಜಿದ್ ಎಂಬಾತನ ಪರಿಚಯವಾಗಿದೆ. ಆ ಸಂದರ್ಭದಲ್ಲಿ ಸಾಜಿದ್ 15 ಲಕ್ಷ ಕೊಟ್ಟರೆ ಎರಡು ದಿನದಲ್ಲಿ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಆತನ ಮಾತನ್ನು ನಂಬಿದ ರಷೀದ್ ಅವರು ಮಂಗಳೂರಿನಿಂದ ಬೆಂಗಳೂರಿಗೆ ಬಂದು ಲಾಡ್ಜ್‍ವೊಂದರಲ್ಲಿ ಉಳಿದುಕೊಂಡಿದ್ದಾರೆ.
ಇವರು ಬಂದಿರುವ ವಿಷಯ ತಿಳಿದು ಸಾಜಿದ್ ಲಾಡ್ಜ್ ಬಳಿ ಹೋಗಿ ರಷೀದ್ ಅವರನ್ನು ಕರೆದುಕೊಂಡು ಮಲ್ಲೇಶ್ವರದ ಮಾಲ್ ಬಳಿ ಹೋಗಿದ್ದಾರೆ. ಆ ಸ್ಥಳದಲ್ಲಿ ಮೂವರನ್ನು ಪರಿಚಯ ಮಾಡಿಕೊಟ್ಟಿದ್ದಾನೆ. ನಂತರ 15 ಲಕ್ಷ ಪಡೆದುಕೊಂಡು ಈ ಹಣವನ್ನು ಬ್ಯಾಂಕ್‍ನಲ್ಲಿ ಡೆಪಾಜಿಟ್ ಮಾಡುವುದಾಗಿ ಹೇಳಿ ಅಲ್ಲಿಂದ ಆರೋಪಿಗಳು ತೆರಳಿದ್ದಾರೆ. ಮತ್ತೆ ಎರಡು ದಿನ ಬಿಟ್ಟು ರಷೀದ್ ಅವರನ್ನು ಹಾವೇರಿಗೆ ಕರೆಸಿಕೊಂಡಾಗ ಹಣ ದ್ವಿಗುಣದ ಬಗ್ಗೆ ಪ್ರಶ್ನಿಸಿದ್ದಾರೆ.
ಆ ಸಂದರ್ಭದಲ್ಲಿ ಆರೋಪಿ ಸಾಜಿದ್ ಸ್ವಲ್ಪ ಸಮಸ್ಯೆಯಾಗಿದೆ. ಇನ್ನೂ 15 ಲಕ್ಷ ಕೊಟ್ಟರೆ ಒಟ್ಟಿಗೆ ಹಣ ದ್ವಿಗುಣ ಮಾಡಿಕೊಡುತ್ತೇನೆ ಎಂದು ನಂಬಿಸಿದ್ದಾನೆ. ರಷೀದ್ ಅವರು ಸಂಬಂಧಿಕರಿಂದ 13 ಲಕ್ಷ ಹಣ ಹೊಂದಿಸಿ, ತಮ್ಮ ಬಳಿ ಇದ್ದ 2 ಲಕ್ಷ ಸೇರಿ ಒಟ್ಟು 15 ಲಕ್ಷ ಹಣವನ್ನು ಆರ್‍ಟಿಜಿಎಸ್ ಮಾಡಿದ್ದಾರೆ. ತದನಂತರದಲ್ಲಿ ರಷೀದ್ ಅವರು ಸಾಜಿದ್‍ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ.
ನಂತರ ರಷೀದ್ ಅವರು ದೂರವಾಣಿ ಕರೆ ಮಾಡಿ ಹಣದ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಬೆದರಿಸಿದ್ದಾರೆ. ರಷೀದ್ ಅವರು ಬೆಂಗಳೂರಿಗೆ ಬಂದು ಹಣಕ್ಕಾಗಿ ಕಾದರೂ ಪ್ರಯೋಜನವಾಗಿಲ್ಲ. ತಾನು ಮೋಸಹೋದನೆಂದು ಅರಿತು ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ನಾಲ್ವರ ವಿರುದ್ಧ ರಷೀದ್ ಅವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.//////