Belagavi News In Kannada | News Belgaum

ರಷ್ಯಾ ಸೈನಿಕರು ಉಕ್ರೇನ್ ಮಹಿಳೆಯರ ಮೇಲೆ ದೌರ್ಜನ್ಯ

ಕೀವ್: ಉಕ್ರೇನ್ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ಮುಂದುವರಿಸಿದೆ. ರಷ್ಯಾ ಸೈನಿಕರು ಉಕ್ರೇನ್ ಮಹಿಳೆಯರ ಮೇಲೆ ದೌರ್ಜನ್ಯವನ್ನು ನಡೆಸುತ್ತಿದ್ದಾರೆ. ನನ್ನ ಮೇಲೆ ರಷ್ಯಾ ಸೈನಿಕರು ಅತ್ಯಾಚಾರ ನಡೆಸಿದ್ದಾರೆ ಎಂದು ಉಕ್ರೇನ್ ಮಹಿಳೆಯೊಬ್ಬರು ಆರೋಪಿಸಿ ಕಣ್ಣೀರಿಟ್ಟಿದ್ದಾರೆ.
ಮಹಿಳೆ ಆರೋಪವೇನು?: ನನ್ನ ಗಂಡನನ್ನು ಗುಂಡಿಕ್ಕಿ ಕೊಂದ ಕೆಲವೇ ಕ್ಷಣಗಳಲ್ಲಿ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ನನ್ನ ಪತಿಯನ್ನು ಕೊಂದಿದ್ದರಿಂದ ನನ್ನ 4 ವರ್ಷದ ಮಗ ಗಾಬರಿಯಿಂದ ಅಳುತ್ತಿದ್ದನು. ಆಗ ಅವನ ಅಳುವನ್ನು ಕೇಳಿಸಿಕೊಂಡು ಅಲ್ಲಿಗೆ ಬಂದ ರಷ್ಯಾದ ಸೈನಿಕರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಆಕೆಯ ಆರೋಪವನ್ನು ಈಗ ಉಕ್ರೇನ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನಡೆದಿದ್ದೇನು?: ಮಾ. 9ರಂದು ರಷ್ಯಾದ ಸೈನಿಕರು ನಮ್ಮ ಮನೆಯತ್ತ ಬರುತ್ತಿರುವ ಚಪ್ಪಲಿಯ ಸದ್ದು ಕೇಳಿತು. ನಂತರ ಮನೆಯ ಗೇಟ್ ಓಪನ್ ಆದ ಸದ್ದು ಕೇಳಿತು. ಅವರು ಮೊದಲು ನಮ್ಮ ಮನೆಯ ನಾಯಿಯನ್ನು ಕೊಂದು ನಂತರ ನನ್ನ ಪತಿಗೆ ಗುಂಡು ಹಾರಿಸಿ ಕೊಂದರು. ನಾನು ಕಿಟಕಿ ಬಳಿ ಹೋಗಿ ನೋಡಿದಾಗ ರಷ್ಯಾದ ಸೇನೆಯ ಯುವಕನೊಬ್ಬ ನನ್ನ ಗಂಡನಿಗೆ ಗುಂಡು ಹಾರಿಸಿದ್ದ. ನನ್ನ ಗಂಡ ಗೇಟಿನ ಬಳಿ ನೆಲದಲ್ಲಿ ಸತ್ತು ಬಿದ್ದಿದ್ದರು ಎಂದು ಹೇಳುತ್ತಾ ಮಹಿಳೆ ಕಣ್ಣೀರು ಹಾಕಿದ್ದಾರೆ.
ರಷ್ಯಾದ ಸೈನಿಕರು ಮನೆಯೊಳಗೆ ನುಗ್ಗಿದರು. ನನ್ನ ಮಗ ಪಕ್ಕದ ರೂಮಿನಲ್ಲಿ ಅಳುತ್ತಾ ಕೂತಿದ್ದ. ಆಗ ನನಗೆ ಬಂದೂಕು ತೋರಿಸಿ ಹೆದರಿಸಿ, ನನ್ನ ಮೇಲೆ ಅತ್ಯಾಚಾರವೆಸಗಿದರು. ನಾನು ಬಾಯಿ ಮುಚ್ಚಿಕೊಳ್ಳದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ನಿನ್ನ ಮಗ ಅಳುವುದನ್ನು ನಿಲ್ಲಿಸದಿದ್ದರೆ ಅವನನ್ನೂ ಕೊಲ್ಲುತ್ತೇವೆ ಎಂದು ನನಗೆ ಹೆದರಿಸಿದರು. ಅತ್ಯಾಚಾರ ನಡೆಸಿದ ಮೇಲೆ ನನ್ನ ಹಣೆಗೆ ಬಂದೂಕು ಇಟ್ಟು ಇವಳನ್ನು ಕೊಲ್ಲೋದಾ ಅಥವಾ ಬದುಕಿಸೋದಾ? ಎಂದು ಗೇಲಿ ಮಾಡುತ್ತಾ ಕೊನೆಗೆ ನನ್ನನ್ನು ಸಾಯಿಸದೆ ಅಲ್ಲೇ ಬಿಟ್ಟು ಹೋದರು ಎಂದು ತನಗಾಗಿರುವ ಕಷ್ಟವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ./////