Belagavi News In Kannada | News Belgaum

ಸರ್ಕಾರಿ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಅಗತ್ಯ ಸೌಕರ್ಯ ಕಲ್ಪಿಸಿ

ಖಾನಾಪೂರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್‌ ಅವರು ಇಂದು ಖಾನಾಪೂರ ತಾಲೂಕಿನ ವಿವಿಧ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಾಲೆಗಳಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಹೆಬ್ಬಾಳದ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೇವರ್ಸ್‌ ಅಳವಡಿಸುವ ಕಾಮಗಾರಿಯನ್ನು ಪರಿಶೀಲಿಸಿದರು. ಶಾಲಾ ಕಟ್ಟಡ ಹಾಗೂ ಶೌಚಾಲಯವನ್ನು ವೀಕ್ಷಿಸಿದರು. ಶೌಚಾಲಯದಲ್ಲಿ ನಿರಂತರವಾಗಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಬೀಡಿ ಗ್ರಾಪಂ ವ್ಯಾಪ್ತಿಯ ನಯಾನಗರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಶೌಚಾಲಯ ಕಾಮಗಾರಿಯನ್ನು ಪರಿಶೀಲಿಸಿದರು. ಶಾಲೆಯಲ್ಲಿ ಆವರಣ ಗೋಡೆ ಹಾಗೂ ಆಟದ ಮೈದಾನ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಕೈಗೊಳ್ಳುವಂತೆ ಸೂಚಿಸಿದರು. ಕಸಬಾ ನಂದಗಡ ಗ್ರಾಪಂ ವ್ಯಾಪ್ತಿಯ ಸಂಗೊಳ್ಳಿ ರಾಯಣ್ಣ ಸ್ಮಾರಕ ವಸತಿ ಶಾಲೆಯಲ್ಲಿ ಕೈಗೊಂಡಿರುವ ಪೇವರ್ಸ್‌ ಕಾಮಗಾರಿ, ಬಾಸ್ಕೆಟ್‌ ಬಾಲ್‌ ಕೋರ್ಟ್‌ ಹಾಗೂ ಐಇಸಿ ಪೇಂಟಿಂಗ್‌ ಕಾಮಗಾರಿಯನ್ನು ವೀಕ್ಷಿಸಿದರು. ಮಂಗೇನಕೊಪ್ಪ ಗ್ರಾಪಂ ವ್ಯಾಪ್ತಿಯ ಬೆಂಡೇವಾಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಗತಿಯಲ್ಲಿರುವ ಅಡುಗೆ ಕೋಣೆ ಹಾಗೂ ಆವರಣ ಗೋಡೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ವಿತರಿಸಲಾಗುವ ಬಿಸಿ ಹಾಲನ್ನು ಸಿಇಓ ಅವರು ಸೇವಿಸಿ, ಗುಣಮಟ್ಟವನ್ನು ಪರಿಶೀಲಿಸಿದರು. ಕೇರವಾಡ ಗ್ರಾಪಂ ವ್ಯಾಪ್ತಿಯ ಹಂದೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆವರಣ ಗೋಡೆ, ಪೇವರ್ಸ್, ಬಾಸ್ಕೆಟ್ ಬಾಲ್ ಕೋರ್ಟ್, ಆಟದ ಮೈದಾನ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಎಸ್‌ ಡಿಎಂಸಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಶಾಲೆಗೆ ಹೆಚ್ಚುವರಿಯಾಗಿ ಮೂರು ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು. ಗ್ರಾಪಂ ವತಿಯಿಂದ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಸಿಇಓ ಅವರು ಪಿಡಿಓ ಅವರಿಗೆ ಸೂಚಿಸಿದರು. ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಮನರೇಗಾ ಯೋಜನೆಯಡಿ ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಎಚ್.ವಿ. ದರ್ಶನ್‌ ಅವರು ತಾಪಂ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಖಾನಾಪೂರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ ಧನವಾಡಕರ್, ಸಹಾಯಕ ನಿರ್ದೇಶಕಿ ರೂಪಾಲಿ ಬಡಕುಂದ್ರಿ, ತಾಲೂಕಾ ತಾಂತ್ರಿಕ‌ ಸಂಯೋಜಕ ಮುರುಗೇಶ ಯಕ್ಕಂಚಿ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ಪಿಡಿಓಗಳು, ತಾಂತ್ರಿಕ ಸಹಾಯಕರು, ಗ್ರಾಪಂ ಸಿಬ್ಬಂದಿ ಇದ್ದರು.//////