Belagavi News In Kannada | News Belgaum

ಮೃತ‌ ಮಹಿಳಾ ಕಾರ್ಮಿಕ ಕುಟುಂಬಕ್ಕೆ ಪರಿಹಾರಧನ ಮಂಜೂರಾತಿ

ಗ್ರಾಮ ಒನ್ ಕೇಂದ್ರದ ಆಪರೇಟರ್ ಮಾದರಿ ಕೆಲಸ

 

ಬೆಳಗಾವಿ, : ಮಾನ್ಯ ಮುಖ್ಯಮಂತ್ರಿಯವರ ಕನಸಿನ,ಮಹತ್ವಾಕಾಂಕ್ಷೆಯ ಯೋಜನೆಯಾದ “ಗ್ರಾಮ ಒನ್”‌ ಜನೆವರಿ 26 2022 ರಂದು ಆರಂಭವಾಗಿದ್ದು, ಗ್ರಾಮೀಣ ಜನರಿಗೆ ಸರ್ಕಾರದ ಎಲ್ಲ ಸೇವೆಗಳು ದೊರೆಯಲೆಂದು ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ “ಗ್ರಾಮ ಒನ್”‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೇವೆಗಳನ್ನು ಕೂಡ ಸೇವಾಸಿಂಧು ಮುಖಾಂತರ ನೀಡಲಾಗುತ್ತಿದೆ.

ಬೆಳಗಾವಿ ತಾಲೂಕಿನ ಸುಳಗಾ (ಉ) ಗ್ರಾಮದಲ್ಲಿ ಕಟ್ಟಡ ಕಾರ್ಮಿಕರಾದ ಶಾಂತಾ ಉಚಗಾಂವಕರ ಅನಾರೋಗ್ಯದಿಂದ ಇತ್ತೀಚೆಗೆ ಮೃತಪಟ್ಟದ್ದರು.
ಇದನ್ನು ಗಮನಿಸಿದ ಗ್ರಾಮ ಒನ್ ಆಪರೇಟರ್ ಬಸವರಾಜ ಪೂಜಾರಿ (ಹಿರೆಮಠ) ಅವರು, ಕುಟುಂಬದವರಿಗೆ ಸಾಂತ್ವನ ಹೇಳಿದ್ದಲ್ಲದೇ, ಮೃತಪಟ್ಟ ಕಾರ್ಮಿಕರ ಕುಟುಂಬಸ್ಥರಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ಸಹಾಯಧನಕ್ಕೆ “ಗ್ರಾಮ ಒನ್”‌ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಿದ್ದರು.

ಪರಿಹಾರಧನ ಮಂಜೂರಾದ ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳಾದ ಎಮ್. ಜಿ. ಹೀರೆಮಠ, ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟಿ ಅವರು ಸೋಮವಾರ(ಮಾ.28) ಸಂತ್ರಸ್ಥ ಕುಟುಂಬಕ್ಕೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮ ಒನ್ ಕೇಂದ್ರದ ಆಪರೆಟರ್‌ಗಳಿಗೆ ಇದೊಂದು ಮಾದರಿಯಾಗಬೇಕು. ತಮ್ಮ ವ್ಯಾಪ್ತಿಯಲ್ಲಿ ಇರುವ ಜನರಿಗೆ ಸರಕಾರದಿಂದ ಲಭ್ಯವಿರುವ ಸಹಾಯ-ಸೌಲಭ್ಯಗಳನ್ನು ಒದಗಿಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.
ಜನರ ಮನೆಬಾಗಿಲಿಗೆ ಸಹಾಯ-ಸೌಲಭ್ಯವನ್ನು ಒದಗಿಸಬೇಕು ಎಂಬ ಸರಕಾರದ ಆಶಯವನ್ನು ಈಡೇರಿಸಲು ಎಲ್ಲ ಗ್ರಾಮ ಒನ್ ಕೇಂದ್ರದ ಆಪರೇಟರ್ ಗಳು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ಮೃತ ಕಾರ್ಮಿಕಳ ಕುಟುಂಬದ ವಾರಸುದಾರರಾದ ಕಲ್ಲಪ್ಪ ಉಚಗಾಂವಕರ ಅವರು ಪರಿಹಾರಧನ ಮಂಜೂರಾದ ಆದೇಶದ ಪ್ರತಿಯನ್ನು ಸ್ವೀಕರಿಸಿದರು.
ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಅತೀಶ ಢಾಲೆ ಅವರು ಉಪಸ್ಥಿತರಿದ್ದರು.