ರಸ್ತೆ ಅಪಘಾತದಲ್ಲಿ ಯೋಧ, ವಿದೇಶಿ ಪ್ರಜೆ ಸಾವು

ಬೆಂಗಳೂರು: ರಾತ್ರಿಪಾಳಿ ಸಿಬ್ಬಂದಿಯ ಕರ್ತವ್ಯ ಪರಿಶೀಲಿಸಿ ಮತ್ತೊಂದು ಕ್ಯಾಂಪ್ಗೆ ಹೋಗುತ್ತಿದ್ದ ಸಿಆರ್ಪಿಎಫ್ ಸಬ್ಇನ್ಸ್ಪೆಕ್ಟರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಬ್ ಇನ್ಸ್ಪೆಕ್ಟರ್ ಹಾಗೂ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ಸಿಆರ್ಪಿಎಫ್ ಸಬ್ಇನ್ಸ್ಪೆಕ್ಟರ್ ಸ್ವಾಮಿಗೌಡ (54) ಮತ್ತು ಬೈಕ್ ಸವಾರ, ಎಂಜಿನಿಯರಿಂಗ್ ವಿದ್ಯಾರ್ಥಿ ಅಮ್ಮರ್ (22) ಮೃತಪಟ್ಟವರು ಎಂದು ಯಲಹಂಕ ಸಂಚಾರಿ ಠಾಣೆ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಸಿಆರ್ಪಿಎಫ್ ವೆಸ್ಟ್ ಕ್ಯಾಂಪಸ್ನಿಂದ ಸಬ್ಇನ್ಸ್ ಪೆಕ್ಟರ್ ಸ್ವಾಮಿಗೌಡ ಅವರು ಸಿಆರ್ಪಿಎಫ್ ಗೇಟ್ ಬಳಿ ರಾತ್ರಿ ಪಾಳಿ ಸಿಬ್ಬಂದಿಯ ಕರ್ತವ್ಯ ಪರಿಶೀಲಿಸಿ ರಾತ್ರಿ 11.30ರ ಸುಮಾರಿನಲ್ಲಿ ಈಸ್ಟ್ ಕ್ಯಾಂಪಸ್ಗೆ ನಡೆದು ಹೋಗುತ್ತಿದ್ದರು.
ಆ ಸಂದರ್ಭದಲ್ಲಿ ಯಲಹಂಕ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಯಲಹಂಕ ಕಡೆಯಿಂದ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದ ಅಮ್ಮರ್ ನಿಯಂತ್ರಣ ತಪ್ಪಿ ಸ್ವಾಮಿಗೌಡ ಅವರಿಗೆ ಡಿಕ್ಕಿ ಹೊಡೆದು ಆತನೂ ಕೆಳಗೆ ಬಿದ್ದಿದ್ದಾನೆ. ಸ್ವಾಮಿಗೌಡ ಅವರಿಗೆ ಗಂಭೀರ ಪೆಟ್ಟಾಗಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ.
ಅಪಘಾತ ಮಾಡಿ ಕೆಳಗೆ ಬಿದ್ದ ಬೈಕ್ ಸವಾರನ ಹೆಲ್ಮೆಟ್ ಕಳಚಿಕೊಂಡು ಬಿದ್ದಿದ್ದರಿಂದ ಆತನ ತಲೆ ಹಾಗೂ ಕೈ ಇನ್ನಿತರ ಭಾಗಗಳಿಗೆ ಗಂಭೀರ ಪೆಟ್ಟಾಗಿತ್ತು. ಆತನನ್ನು ಸಹ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮಧ್ಯರಾತ್ರಿ 12.30ರಲ್ಲಿ ಮೃತಪಟ್ಟಿದ್ದಾರೆ.
ಬೈಕ್ ಸವಾರ ಯಮನ್ ದೇಶದ ಪ್ರಜೆ. ಈತ ನಗರದ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು.
ಸುದ್ದಿ ತಿಳಿದು ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.//////