Belagavi News In Kannada | News Belgaum

ದೇಶದಲ್ಲೇ ಅತಿದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ: ರಾಹುಲ್

ಬೆಂಗಳೂರು: ರಾಜ್ಯಾದ್ಯಂತ 2 ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಬಿಜೆಪಿ ರಾಜ್ಯ ಸರ್ಕಾರ ಬಡವರಿಂದ ಹಣ ತೆಗೆದುಕೊಂಡು ಬೆರಳೆಣಿಕೆಯಷ್ಟು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ. ಇದು ಶೇ.40ರಷ್ಟು ಕಮಿಷನ್ ಪಡೆಯುವ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಸದಾ ಮಾತನಾಡುತ್ತಾರೆ. ಈಗ ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಎಲ್ಲರೂ ನಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿ ನಿರುದ್ಯೋಗ ಮತ್ತು ಆರ್ಥಿಕತೆಯ ವಿಷಯಗಳ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ. ಹೀಗಾಗಿಯೇ ಕೋಮುವಾದದ ವಿಷಯವನ್ನು ಮುಂದಿಟ್ಟಿದೆ. ಬಿಜೆಪಿ ಸರ್ಕಾರದ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಿವೆ. ದೇಶದ ಆರ್ಥಿಕತೆ ಕುಸಿದಿದೆ. ಈ ನಡುವೆ ಹಣದುಬ್ಬರವೂ ಹೆಚ್ಚಾಗುತ್ತಿದ್ದು, ಉದ್ಯೋಗ ಕ್ಷೇತ್ರವನ್ನು ನಾಶಪಡಿಸುತ್ತಿದೆ. ಬಿಜೆಪಿ ಬಯಸಿದರೂ ಇನ್ನು ಜನರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಏಕೆಂದರೆ ಉದ್ಯೋಗ ಕ್ಷೇತ್ರಗಳನ್ನೇ ನಾಶಪಡಿಸಿದ್ದಾರೆ. ಆದರೆ, ಬಿಜೆಪಿ ವಿಭಜಿಸುವ ಕಾರ್ಯದಲ್ಲಿ ತೊಡಗಿದರೆ ಕಾಂಗ್ರೆಸ್ ಜೋಡಿಸುವ ಕಾರ್ಯದಲ್ಲಿ ತೊಡಗಿದೆ. ಅಂತಹ ಅವಕಾಶ ನಮಗೆ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2019ರ ನಂತರ ಕಾಂಗ್ರೆಸ್ ಸರ್ಕಾರ ಪತನವಾದ ನಂತರ ಕರ್ನಾಟಕದಲ್ಲಿ ಪ್ರಕ್ಷುಬ್ಧತೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಒಂದಾಗಿ ಹೋರಾಟ ನಡೆಸುವ ಮೂಲಕ 2023ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಗುರಿ ಹೊಂದಬೇಕು ಎಂದು ಕರೆ ನೀಡಿದ್ದಾರೆ./