Belagavi News In Kannada | News Belgaum

ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ. ಘೋಷಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಶನಿವಾರ ಬೆಂಗಳೂರಿನ ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಗತಿಪರ ಸಮಾಜ, ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧ, ಅಪರಾಧಿಗಳೊಂದಿಗೆ ರಾಜಿಯಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆ ಇದೆ, ರಾಷ್ಟ್ರದಲ್ಲಿ ಕರ್ನಾಟಕ ಪೊಲೀಸ್ ನಂಬರ್ 1 ಸ್ಥಾನಕ್ಕೆ ಏರಲಿ ಎಂದರು.

ಅಂತಃಕರಣ, ಮಾನವೀಯತೆ ಬಹಳ ಮುಖ್ಯ: ನಾಡಿನ, ಜನರ ರಕ್ಷಣೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವುದು ಇಲಾಖೆಯ ಪ್ರಮುಖ ಕರ್ತವ್ಯ. ಇಲಾಖೆಯಲ್ಲಿ ಶಿಸ್ತು, ದಕ್ಷತೆ, ನಿಷ್ಠೆ ಬಹಳ ಮುಖ್ಯ. ದೇಶದಲ್ಲಿ ಕರ್ನಾಟಕ ಪೊಲೀಸ್ ಉನ್ನತ ಸ್ಥಾನದಲ್ಲಿದೆ. ಚುನಾವಣೆ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪೊಲೀಸ್ ತುಕಡಿ ಕರೆಸುವಾಗ ಕರ್ನಾಟಕಕ್ಕೆ ಆದ್ಯತೆ ನೀಡುತ್ತಾರೆ. ನಿಷ್ಪಕ್ಷಪಾತ, ಮಾನವೀಯತೆ, ಅಂತಃಕರಣ ಹಾಗೂ ನಿಸ್ಪೃಹ ಕರ್ತವ್ಯಕ್ಕೆ ನಮ್ಮ ಪೊಲೀಸ್ ಹೆಸರುವಾಸಿ ಎಂದರು.

ಸಮಾಜದ ಸ್ವಾಸ್ಥ್ಯ, ಶಾಂತಿ ಕಾಪಾಡಲು ತಮ್ಮ ಅಂತಃಕರಣ, ಮಾನವೀಯತೆ ಬಹಳ ಮುಖ್ಯ. ನ್ಯಾಯನಿಷ್ಠುರವಾಗಿ ಕೆಲಸ ಮಾಡಬೇಕು. ಫೋರೆನ್ಸಿಕ್ ಪ್ರಯೋಗಾಲಯ ಅಪರಾಧಿಗಳ ಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕೋರ್ಟ್‌ಗಳು ಅದರ ವರದಿಗೆ ಮಹತ್ವ ನೀಡುತ್ತದೆ. ಬೆಂಗಳೂರಿನಲ್ಲಿ ನಾರ್ಕೋಟಿಕ್ಸ್, ಸೈಬರ್ ಹಾಗೂ ಫೋರೆನ್ಸಿಕ್ ಲ್ಯಾಬ್‌ವುಳ್ಳ ಠಾಣೆಗಳನ್ನು ತೆರೆಯಲಾಗಿದೆ. ಹುಬ್ಬಳ್ಳಿ, ಬಳ್ಳಾರಿಯಲ್ಲಿಯೂ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿವಮೊಗ್ಗ ಮುಂತಾದ ಕಡೆಗಳಲ್ಲಿಯೂ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.

ಇಂಟೆಲಿಜೆನ್ಸ್ ಸದೃಢತೆಗೆ ಕ್ರಮ: 
 ಪೊಲೀಸರ ಬುದ್ಧಿವಂತಿಕೆಯೂ ಮುಖ್ಯ ಹೊಸ ತರಬೇತಿ ವ್ಯವಸ್ಥೆ ಮತ್ತು ಸಿಬ್ಬಂದಿ ಹೆಚ್ಚಿಸುವ ಮೂಲಕ ಇಂಟೆಲಿಜೆನ್ಸ್‌ನ್ನು ಇನ್ನಷ್ಟು ಸದೃಢ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಡ್ರಗ್ಸ್ ವಿರುದ್ದದ ಸಮರ ನಿರಂತರವಾಗಿರಲಿ: ಮಾದಕ ವಸ್ತು ಮಾರಾಟದ ವಿರುದ್ಧ ಸಮರ ಸಾರಿರುವ ಕರ್ನಾಟಕ ಪೊಲೀಸ್ ಅತಿ ಹೆಚ್ಚು ಡ್ರಗ್ಸ್‌ನ್ನು ವಶಪಡಿಸಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನೂತನ ಕಾನೂನಿನ ಅನ್ವಯ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಡ್ರಗ್ಸ್ ವಿರುದ್ಧದ ಸಮರ ನಿರಂತರವಾಗಿ ನಡೆಯಬೇಕು. ಸಂಪೂರ್ಣವಾಗಿ ನಿಷೇಧವಾಗುವವರೆಗೂ ಪ್ರಯತ್ನ ಜಾರಿಯಲ್ಲಿರಬೇಕು.

ಶಾಲಾ, ಕಾಲೇಜು, ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕು. ಸೈಬರ್ ಅಪರಾಧಗಳನ್ನು ಕಂಡುಹಿಡಿಯಲು ಪೊಲೀಸರಿಗೆ ವಿಶೇಷ ತರಬೇತಿ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದು ಕೆಲಸ ಮಾಡಿರುವುದು ಶ್ಲಾಘನೀಯ ಮತ್ತು ದಾಖಲಾರ್ಹ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದರು.