Belagavi News In Kannada | News Belgaum

ಸ್ವಾತಂತ್ರ್ಯದ ಹೋರಾಟದ ಕಿಚ್ಚು ನೆನಪಿಸುವ ”ಪ್ರಿಂಟಿಂಗ ಮಶೀನ್” ನಾಟಕ

 

ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ರಂಗಸಂಪದವು ಮೂರು ದಿನಗಳ ನಾಟಕೋತ್ಸವವನ್ನು ಹಮ್ಮಿಕೊಂಡಿತ್ತು. ಶನಿವಾರ 26 ರಂದು ನಾಟಕೋತ್ಸವದ ಮೊದಲ ದಿನ ರಂಗಸಂಪದ ಹವ್ಯಾಸ ಕಲಾವಿದರ ತಂಡ, ಪ್ರದರ್ಶಿಸಿದ ಪ್ರಿಂಟಿಂಗ ಮಶೀನ್ ನಾಟಕ ಪ್ರದರ್ಶನ ವೀಕ್ಷಿಸಲು ಹೋದೆ.
ಸ್ವಾತಂತ್ರ್ಯದ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಅದರಂತೆ ಸ್ವಾತಂತ್ರ್ಯದ ಹೋರಾಟದ ಚರಿತ್ರೆಯ ಪುಟಗಳನ್ನು ತಿರುವಿದಾಗ ಹಲವಾರು ಕುತುಹಲಕಾರಿ ಸಂಗತಿಗಳು ಅನಾವರಣಗೊಳ್ಳುತ್ತವೆ.
1932 ರಲ್ಲಿ ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಬ್ರಿಟೀಷರು ಸ್ವಾತಂತ್ರ್ಯದ ಹೋರಾಟದಲ್ಲಿ ಮುಂಚುಣಿಯಲ್ಲಿರುವ ಎಲ್ಲ ನಾಯಕರನ್ನು ಹಿಡಿದು ಜೈಲಿಗೆ ಅಟ್ಟುತ್ತಾರೆ.


ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಲ್ಪ ಹಿನ್ನೆಡೆಯಾಗುತ್ತದೆ. ಪೋಲೀಸರ ವಶದಲ್ಲಿದ್ದ ಜಯದೇವರಾವ್ ಕುಲಕರ್ಣಿ ಎನ್ನುವ ಒಬ್ಬ ಯುವಕ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಬಂದು ಗುಪ್ತವಾಗಿ ಕರಪತ್ರಗಳನ್ನು ಮುದ್ರಿಸಿ ತನ್ನ ಎಲ್ಲ ಸಹ ಹೋರಾಟಗಾರರಿಗೆ ಮುಂದಿನ ಹೋರಾಟಗಳ ರೂಪರೇಶೆಯ ಮಾಹಿತಿಯನ್ನು ನೀಡುತ್ತಿರುತ್ತಾನೆ.
ಆ ಕರಪತ್ರ ಮುದ್ರಿಸುವ ಮಶೀನ್ ಹಾಗೂ ಪೋಲೀಸರಿಂದ ತಪ್ಪಿಸಿಕೊಂಡ ಜಯದೇವರಾವ್ ಕುಲಕರ್ಣಿಯನ್ನು ಹಿಡಿಯಲು ಬ್ರಟೀಷ ಸರ್ಕಾರ ಶ್ರಮ ಪಡುವ ಘಟನೆಯ ಸುತ್ತ ಹೆಣೆಯಲಾದ ಕಥೆಯ ಚಿತ್ರಣವನ್ನ ಖ್ಯಾತ ಲೇಖಕ ಹಾಗೂ ರಂಗಕರ್ಮಿ ಶಿರೀಷ ಜೋಶಿ ಅವರು ಸ್ವಾತಂತ್ರ್ಯ ಹೋರಾಟದ ಚಿತ್ರಗಳು ಕಣ್ಣುಮುಂದೆ ಬಂದುನಿಲ್ಲುವಂತೆ ನಾಟಕ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ.

1973ರಲ್ಲಿ ಅಣ್ಣುಗುರೂಜಿ ಅವರು ಬರೆದ ಬೆಳಗಾವಿ ಜಿಲ್ಲೆಯ ಸ್ವತಂತ್ರ ಸಂಗ್ರಾಮ ಎಂಬ ಪುಸ್ತಕದಿಂದ “ ಸೈಕ್ಲೋಸ್ಟೈಲ್ ಮಶೀನ್ ಶೋಧ” ಎಂಬ ಆಯ್ದ ಭಾಗದಿಂದ ಸ್ವಾತಂತ್ರ್ಯ ಹೋರಾಟದ ಸನ್ನಿವೇಶಗಳ ಚಿತ್ರಣಗಳನ್ನು ಎಳೆ ಎಳೆಯಾಗಿ ಪ್ರೇಕ್ಷಕರಿಗೆ ಮನಮುಟ್ಟುವಂತೆ ನಾಟಕ ನಿರ್ದೇಶನ ಮಾಡುವ ಮೂಲಕ ರಂಗಸಜ್ಜಿಕೆಯಲ್ಲಿ ಅನಾವರಣಗೊಳಿಸಿರುವದು ರಂಗಕರ್ಮಿ ಶಿರೀಷ ಜೋಶಿ ಅವರ ಬಹುಮುಖ ಪ್ರತಿಭೆಗೆ ಹಿಡಿದಕನ್ನಡಿಯಾಗಿದೆ.

ಪ್ರಥಮ ಸನ್ನಿವೇಶದಲ್ಲಿ “ಪ್ರಿಂಟಿಂಗ್ ಮಶೀನ್” ನಾಟಕದ ಮುಖ್ಯ ಪಾತ್ರದಾರಿ ಜಯದೇವರಾವ್ ಕುಲಕರ್ಣಿ ಹಾಗೂ ಅವರ ಜೊತೆಯ ಸ್ವಾತಂತ್ರ್ಯ ಹೋರಾಟಗಾರರು ಬೆಟಗೇರಿ ಕೃಷ್ಣಶರ್ಮ ಅವರು ಬರೆದ “ ಮಾತೃ ಭೂಮಿ ಜನನಿ ನಿನ್ನ ಚರಣ ಸೇವೆ ಮಾಡುವೆ “ ಎಂಬ ಹಾಡನ್ನು ಹಾಡುತ್ತ ವೇದಿಕೆಯ ಮಧ್ಯ ಬಂದು ನಿಲ್ಲುವ ಮೂಲಕ ನಾಟಕ ಪ್ರಾರಂಭವಾಯಿತು.
ನಾಟಕದಲ್ಲಿ ಕನಿಷ್ಠ ಪರಿಕರಗಳನ್ನು ರಂಗಸಜ್ಜಿಕೆಯಲ್ಲಿ ಉಪಯೋಗಿಸಿಕೊಳ್ಳುವದು ಮೊದಲಿನಿಂದಲು ರಂಗಕರ್ಮಿ, ನಿರ್ದೇಶಕ ಶಿರೀಷ ಜೋಶಿ ಅವರ ಸ್ವಭಾವ ಅದು ಗೋಚರಿಸಿತು. ಆದರೆ ನಾಟಕ ಪ್ರದರ್ಶನದಲ್ಲಿ ಸೆಟ್ಟಗಳನ್ನು (ಪರಿಕರಗಳನ್ನು) ಆಯಾ ಸ್ಥಳಗಳಲ್ಲಿ ಇಡುವಲ್ಲಿ ಕಲಾವಿದರಲ್ಲಿ ಗೊಂದಲ ಇದ್ದಿರುವದು ಕಂಡು ಬಂತು. ಮುಂದಿನ ಪ್ರಯೋಗದಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದು.

ಸ್ವತಂತ್ರ ಹೋರಾಟಗಾರ ಜಯದೇವರಾವ್ ಕುಲಕರ್ಣಿ ಪಾತ್ರದಾರಿ, ತನ್ನ ಜೊತೆಗಾರರನ್ನುದ್ದೇಶಿಸಿ, ಗೆಳೆಯರೇ, ಸರಕಾರ ರೊಚ್ಚಿಗೆ ಎದ್ದದ. ಹೆಂಗಾದರೂ ಮಾಡಿ ನಮ್ಮನ್ನ ತುಳಿಬೇಕು ಅಂತ ಹುನ್ನಾರ ಮಾಡೇದ. ವಿಲಿಂಗ್ಡನ್ ಸಾಹೇಬ ಆರು ವಾರದ ಒಳಗಾಗಿ ಭಾರತದಾಗ ಒಬ್ಬ ಸ್ವಾತಂತ್ರ ಹೋರಾಟಗಾರನೂ ಇರಕೂಡದು ಅಂತ ಶಪಥ ಮಾಡ್ಯಾನ, ಅದರ ಅಂಗವಾಗಿ ಭರತದಲ್ಲಿ ಎಲ್ಲ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರನ್ನ ಜೇಲಿಗೆ ಕಳಿಸೇದ ನಮ್ಮ ಬೆಳಗಾವಿ ಜಿಲ್ಲೆಯ ಪ್ರಮುಖ ಹೋರಾಟಗಾರರಾದಂಥ ಗಂಗಾಧರ ದೇಶಪಾಂಡೆ, ಅಣ್ಣೂಗುರೂಜಿ, ಅನಂತರಾವ್ ಚಿಕ್ಕೋಡಿ ಅವರು, ಹಿಂಗ ಅನೇಕ ಜನರನ್ನ ಹಿಡದು ಜೈಲಿಗೆ ಹಾಕ್ಯಾರ. ಆದರ ಅಂವಾ ಹೇಳಿದಂಗ ಆರು ವಾರ ಕಳದರೂ ಚಳುವಳಿ ತಣ್ಣಗ ಆಗಲಿಲ್ಲ.

ಅದು ಮುಂದುವರದದ. ಇದರಿಂದ ಬ್ರಟಿಷರು ಇನ್ನಷ್ಟ ರೊಚ್ಚಿಗೆದ್ದಾರ. ಅದರಾಗೂ ನಮ್ಮ ಬೆಳಗಾವಿ ಫೌಜದಾರ ಕಲ್ಲೂರಕರ ಅಂತೂ ಮೂರ ದಿನದಾಗ ನನ್ನ ಹಿಡದ ತರತೇನಿ ಅಂತ ಆಣಿ ಮಾಡ್ಯಾನ. ನಾವು ಎಲ್ಲಿ ಇದ್ದೀವಿ ? ಏನ ಮಾಡ್ತೇವಿ ? ಹ್ಯಾಂಡಬಿಲ್ಲು ಮತ್ತು ಬುಲಟಿನ್ ಎಲ್ಲಿ ಪ್ರಿಂಟ್ ಮಾಡತೇವಿ ? ಮತ್ತ ಅದನ್ನ ಹ್ಯಾಂಗ ಹಂಚತೇವಿ ? ಇವೆಲ್ಲ ಬಾತಮಿ ಅಂವಗ ಗೊತ್ತಾಗ್ಯಾವ. ಆದರ ನಾವು ಅಂಜೂ ಹಂಗಿಲ್ಲ. ಶತಾಯಗತಾಯ ನನ್ನ ಹಿಡಿಬೆಕು ಅಂತ ಪೋಲೀಸರು ಚಡಪಡಿಸಲಿಕ್ಕೆ ಹತ್ಯಾರ ಎಂದು ತನ್ನ ಜೊತೆಗಾರರಿಗೆ ಹೇಳುತ್ತಾನೆ. ನಾಟಕದುದ್ದಕ್ಕೂ ಕರಪತ್ರ ಪ್ರಿಂಟ ಮಾಡುವ ಮಶೀನ್ ಎಲ್ಲಿದೆ ಎಂದು

ಫೋಜದಾರನಿಗೆ ಕಂಡುಹಿಡಿಯಾಲಾರದ ತಿಣಕಾಡುವ ಘಟನೆಗಳ ಸುತ್ತ ಸ್ವಾತಂತ್ರ್ಯ ಹೋರಾಟದ ಕಥೆಯ ತಲ್ಲಣವೆ ನಾಟಕದ ಕಥಾ ವಸ್ತುವಾಗಿತ್ತು. ಜಯದೇವರಾವ್ ಕುಲಕರ್ಣಿ ಪಾತ್ರದಾರಿ ಪರಿಪಕ್ವತೆಯ ಮನೋಜ್ಞ ಅಭಿನಯ ನೀಡಿದರು.

ಅಂದು ಹಿರಿಯರು ಜನ ಸಾಮಾನ್ಯ ಸಾರ್ವಜನಿಕರಲ್ಲಿ ದೇಶಪ್ರೇಮವನ್ನು ಹುಟ್ಟುಹಾಕಲು ಸ್ವಾಭಿಮಾನ ಭಾವನಾತ್ಮಕ ಸಾಹಿತ್ಯ ರಚನೆ ಪ್ರಚಾರದ ಮೂಲಕ ಸ್ವಾತಂತ್ರ್ಯದ ಬಯಕೆಯನ್ನು ಮೂಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ತುಡಿತಕ್ಕೆ ಉತ್ತೇಜನ ನೀಡಿದರು ಎಂಬ ಸೂಕ್ಷ್ಮತೆ ನಾಟಕದಲ್ಲಿ ಕಂಡು ಬಂತು
ಪೋಲೀಸ ಪೆದೆಗಳಾದ ರಾಮಣ್ಣ ಹಾಗೂ ಶಾಮಣ್ಣ ಪಾತ್ರಧಾರಿಗಳು ಸಂದರ್ಭಯೋಚಿತವಾಗಿ ಹೇಳುವ ಕುಚೆಷ್ಟೆ ಸಂಭಾಷಣೆಗೆ ಪ್ರೇಕ್ಷಕರು ಆಗಾಗ ನಗೆಗಡಲಲ್ಲಿ ತೇಲುತ್ತಿದ್ದರು.

ರಘುನಾಥ ಹಾಗೂ ಸರಸ್ವತಿ ಪಾತ್ರದಾರಿಗಳ ಅಭಿನಯ ಪರಿಪಕ್ವತೆಗೆ ಸಾಕ್ಷಿಯಾದರೂ ರಘುನಾಥನ ಪಾತ್ರದಾರಿಯ ಸಂಭಾಷಣೆ ಸ್ಪಷ್ಟವಾಗಿರಲಿಲ್ಲ. ಸರಸ್ವತಿ ಪಾತ್ರಕ್ಕೆ ಇರಬೇಕಿದ್ದ ಉತ್ತರ ಕರ್ನಾಟಕ ಬ್ರಾಹ್ಮಣ ಕುಟುಂಬಗಳ ಮಾತಿನ ಸೊಗಡು ಇರದಿರುವದು ಕಂಡುಬಂತು.

ಫೌಜದಾರ ಪಾತ್ರದಾರಿಯ ಕಲೆಯ ಗಾಂಭಿರ್ಯ, ಗತ್ತು, ಆಂಗಿಕ ಭಾವ ನೋಡುಗರಿಗೆ ಆಕರ್ಷಣೀಯವಾಗಿತ್ತು. ಧ್ವನಿಯ ಏರಿಳಿತ ಪಾತ್ರಕ್ಕೆ ಹೇಳಿ ಮಾಡಿಸಿದಂತಿತ್ತು. ಹೀಗಾಗಿ ಫೌಜದಾರ ಪಾತ್ರದಾರಿ ವಿಶೇಷ ಗಮನ ಸೆಳೆದರು. ರಂಗಸಂಪದಕ್ಕೆ ಬರುವ ದಿನಗಳಲ್ಲಿ ಭರವಸೆಯ ಕಲಾವಿದ ಎಂದೆನಿಸಿದರು.

ನಾಟಕಗಳ ಮಧ್ಯ ಬೆಟಗೇರಿ ಕೃಷ್ಣಷರ್ಮ ಅವರ “ ಭರತಾಂಬೆಯ ಹೀನ ಸ್ಥಿತಿಯನು ಕಣ್ಣು ತೆರೆದು ನೋಡಿರಿ “ ಎಂಬ ಜನಜಾಗ್ರತಿ ದೇಶಭಕ್ತಿ ಗೀತೆ ಹಾಗೂ ಬಂಕಿಮ್ ಚಂದ್ರ ಚಟರ್ಜಿ ಅವರ ಒಂದೇ ಮಾತರಂ ಹಾಡು ನಾಟಕಕ್ಕೆ ವಿಶೇಷ ಮೆರಗನ್ನು ಕೊಟ್ಟವು. ನಾಟಕಕ್ಕೆ ಪೂರಕಾಗುವಂತೆ ಸಂಗೀತವನ್ನು ಸಂಯೋಜಿಸಿದ ಮಂಜುಳಾ ಜೋಶಿ ಅವರ ಸಂಗೀತ ಉತ್ತಮವಾಗಿತ್ತು. ವಸ್ತ್ರವಿನ್ಯಾಸಗಳು ಪಾತ್ರಗಳಿಗೆ ಪೂರಕವಾಗಿದ್ದವು. ನೆರಳು ಬೆಳಕು ಸನ್ನಿವೇಶಗಳಿಗೆ ಪೂರಕವಾಗಿದ್ದವು.

ನಾಟಕದ ಕೊನೆಗೆ ಕಲ್ಲೂರಕರ ಫೌಜದಾರನ ಜೊತೆಗಿರುವ ಇಬ್ಬರೂ ರಾಮಣ್ಣ ಹಾಗೂ ಶಾಮಣ್ಣ ಪೋಲೀಸ್ ಪೆದೆಗಳು ಫೌಜದಾರನಿಗೆ ತಿರುಗಿ ಬೀಳುವ ಮೂಲಕ ತಾವೂ ಭಾರತ ಮಾತೆಯ ಮಕ್ಕಳು, ನಮ್ಮೊಳಗೂ ಸ್ವಾತಂತ್ರ್ಯ ಹೋರಾಟದ ಕಿಚ್ಚಿದೆ. ಮೊದಲು ನನ್ನ ದೇಶ, ನಂತರ ನೌಕರಿ, ಕುಟುಂಬ ಎಂಬ ಸಂದೇಶವನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಸಫಲರಾದರು.

ಭಾರತ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಲಕ್ಷಾಂತರ ಜನರ ತ್ಯಾಗ ಹೋರಾಟ ಬಲಿದಾನ ಇದರ ಹಿಂದಿದೆ ಹೀಗೆ ದಾಸ್ಯದ ಸಂಕೋಲೆಯನ್ನು ಕಳಚಿ ಹಾಕಲು ಮನೆ ಮಠ ಕುಟುಂಬದ ಬಗ್ಗೆ ಯೋಚಿಸದೆ ಬ್ರಟಿಷರ ವಿರುದ್ಧ ತಿರುಗಿ ಬಿದ್ದವರು ಅಸಂಖ್ಯ ಜನ. ಅವರ ಹೋರಾಟದ ಹಾದಿಯ ನೆನಪುಗಳು ಅವರ ಅನುಭವ ಇಂದಿನ ಸಮಾಜಕ್ಕೆ ಪ್ರೇರಣೆಯಾಗಬೇಕು. ಎಂಬುದನ್ನು “ಪ್ರಿಂಟಿಂಗ ಮಶೀನ್” ನಾಟಕ ಪ್ರತಿಬಿಂಬಿಸುತ್ತದೆ. ಈ ನಿಟ್ಟಿನಲ್ಲಿ ಕುಟುಂಬದವರೆಲ್ಲರೂ ಸೇರಿ ನೋಡಿ ತಿಳಿಯಬೇಕಾದ ಅತ್ಯಂತ ಹೃದಯಸ್ಪರ್ಶಿ ನಾಟಕ ಇದಾಗಿದ್ದು ರಂಜೆನೆ ಹಾಗೂ ತಿಳುವಳಿಕೆ ಎರೆಡನ್ನೂ ಕೊಡುತ್ತದೆ.

ಖ್ಯಾತ ಲೇಖಕ ರಂಗಕರ್ಮಿ ಶಿರೀಷ ಜೋಶಿ ಅವರು ನಾಟಕದ ಮಧ್ಯ ಸಂದರ್ಭಯೋಚಿತವಾಗಿ ಬರೆದ ಅನೇಕ ಸಂಭಾಷಣೆಗಳು ಕಚಗುಳಿ ಇಡುವಲ್ಲಿ ಸಫಲವಾಗಿವೆ. ನಾಡಗೀತೆಗಳಿಗೆ ಹಿರೀಯ ಕಲಾವಿದ ನಾರಾಯಣ ಗಣಾಚಾರಿ, ತಬಲಾ ಸಾಥ ನೀಡಿದರು. ರಂಗಸಂಪದ ನಟರಾದ ಜಯದೇವರಾವ್ ಕುಲಕರ್ಣಿ ಪಾತ್ರದಲ್ಲಿ ಶರಣಗೌಡ ಪಾಟೀಲ, ಕಲ್ಲೂರಕರ ಫೋಜದಾರ ಪಾತ್ರದಲ್ಲಿ ವಿಠಲ ಅಸೂದೆ, ರಾಮಣ್ಣ ಹಾಗೂ ಶಾಮಣ್ಣ ಪೋಲೀಸ್ ಪೆದೆ ಪಾತ್ರಗಳಲ್ಲಿ ಶರಣಯ್ಯ ಮಠಪತಿ ಮತ್ತು ವಿಶ್ವನಾಥ ದೇಸಾಯಿ,

ರಘುನಾಥ ಮನೆಯ ಯಜಮಾನ ಪಾತ್ರದಲ್ಲಿ ಪ್ರಸಾದ ಕಾರಜೋಳ, ರಘುನಾಥನ ಹೆಂಡತಿ ಸರಸ್ವತಿ ಪಾತ್ರದಲ್ಲಿ ಶಾಂತಾ ಆಚಾರ್ಯ, ಇನ್ನುಳಿದ ಪಾತ್ರಗಳಲ್ಲಿ ಕಲಾವಿದರಾದ ವಾಮನ ಮಳಗಿ, ಯೋಗೀಶ ದೇಶಪಾಂಡೆ, ಪೂಜಾ ಕಾರಜೋಳ, ಜಯಶ್ರೀ ಕ್ಷೀರಸಾಗರ, ರವಿರಾಜ, ಇವರುಗಳು ಪಾತ್ರಗಳಿಗೆ ಜೀವ ತುಂಬಿ ಅತ್ಯುತ್ತಮವಾಗಿ ಅಭಿನಯಿದ್ದಾರೆ. ಇವರೆಲ್ಲರೂ ರಂಗಭೂಮಿಗೆ ಭರವಸೆಯ ಕಲಾವಿದರೆನಿಸಿದರು.

ಹುತಾತ್ಮರು ನಡೆಸಿದ ಹೋರಾಟ, ತ್ಯಾಗ, ಬಲಿದಾನದ ಪರವಾಗಿ ನಾವು ಇಂದು ಸ್ವಾತಂತ್ರ್ಯದ ಆನಂದವನ್ನು ಸವೆಯುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಿಗೆ ನಮನಗಳನ್ನು ಸಲ್ಲಿಸುತ್ತ ಭವಿಷ್ಯದ ಭಾರತದ ನಿರ್ಮಾಣಕ್ಕೆ ನಾವೆಲ್ಲ ಧೃಢಸಂಕಲ್ಪ ಮಾಡೋಣ ಎನ್ನುವ ಸಂದೇಶ ಸಾರುವ ಮೂಲಕ ಈ ರಂಗಪ್ರಯೋಗ ಸಫಲವಾಯಿತು.

ಇತಿಹಾಸದ ಪುಠಗಳನ್ನು ತಿರುವಿ ಹಾಕಿದಾಗ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ವೈಯಕ್ತಿಕ ಆಸೆ ಕನಸುಗಳನ್ನು ಬದಿಗೊತ್ತಿ ಕೇವಲ ದೇಶದ ಸ್ವಾತಂತ್ರ್ಯಕ್ಕಾಗಿ ದುಡದಿದ್ದಾರೆ. ತಮ್ಮ ಪ್ರಾಣ ನೀಡಿದ್ದಾರೆ. ಆಧುನಿಕತೆ ಸೋಗಿಗೆ ಜೋತುಬಿದ್ದಿರುವ ಇಂದಿನ ಯುವ ಪೀಳಿಗೆ ದೇಶ ಭಕ್ತಿ, ದೇಶಪ್ರೇಮ, ಸ್ವಾವಲಂಬಿ, ಸ್ವಾಭಿಮಾನಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ನಾವು ನಮ್ಮ ಕೈಲಾದಷ್ಟು ಸಮಾಜದ ಸೇವೆ ಮಾಡಬೇಕು ದೇಶದ ಜವಾಬ್ದಾರಿಯುತ ನಾಗರೀಕರಾಗಿ ನಮ್ಮ ಬೆಳವಣಿಗೆಯ ಬಗ್ಗೆ ಯೋಚಿಸುವದರ ಜೊತೆಗೆ ದೇಶಕ್ಕೆ ನಮ್ಮ ಕೊಡುಗೆಯ ಕುರಿತು ಚಿಂತಿಸಬೇಕಿದೆ. ಭವ್ಯ ಪರಂಪರೆ ಇತಿಹಾಸವಿರುವ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ ಪರಿವರ್ತನೆಯಾಗಿದೆ. ಸ್ವಾತಂತ್ರ್ಯದ ಹೆಸರಿನಲ್ಲಿ ಮನಬಂದಂತೆ ಮಾತನಾಡುವ, ನಡೆದುಕೊಳ್ಳುವ ರೂಡಿ ಬೆಳೆಯುತ್ತಿದೆ.

ಸ್ವಾತಂತ್ರ್ಯ ಹೋರಾಟ ಕುರಿತಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಖ್ಯಾತ ಲೇಖಕ, ರಂಗಕರ್ಮಿ .ಶಿರೀಷ ಜೋಷಿ ಅವರ ಮೊದಲನೆ ರಂಗಪ್ರಯೋಗ ಸವದತ್ತಿಯ ಪರಸಗಡ ನಾಟಕೋತ್ಸವದಲ್ಲಿ ಯಶಸ್ವಿಯಾಗುವದರೊಂದಿಗೆ ಸಾಕಷ್ಟು ಪ್ರೇಕ್ಷಕರ ಮನ್ನಣೆ ಪಡೆಯಿತು ಎರಡನೆ ರಂಗಪ್ರಯೋಗ ಈಗಾಗಲೇ ಮುಗಿಸಿದ್ದು, ಮೂರನೇ ರಂಗಪ್ರಯೋಗ ಎಪ್ರೀಲ್ 3 ರಂದು ರವಿವಾರ ಧಾರವಾಡ ರಂಗಾಯಣದಲ್ಲಿ ಪ್ರದರ್ಶನಗೊಳ್ಳಲಿದೆ.

ಅನಂತ ಪಪ್ಪು