Belagavi News In Kannada | News Belgaum

ಹುಲಿ ಉಗುರು ಮಾರಾಟಕ್ಕೆ ಯತ್ನ; ಆರೋಪಿಗಳ ಸೆರೆ

ಮಡಿಕೇರಿ: ವರ್ಷದ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ಹುಲಿಯ ಕಲ್ಬೇರಳಿನ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಮರೂರು ಗ್ರಾಮದಲ್ಲಿ ನಡೆದಿದೆ.

 

ಜಿಲ್ಲೆಯ ಕುಶಾಲನಗರ ತಾಲೂಕಿನ ಮರೂರು ಗ್ರಾಮದ ಗಣೇಶ್, ಯೋಗೇಶ್, ರಮೇಶ್, ನಟೇಶ್ ದೊರೇಶ್, ನವೀನ್, ಶೇಖರ್ ಮತ್ತು ರಮೇಶ್ ಬಂಧಿತ ಆರೋಪಿಗಳು. ವರ್ಷದ ಹಿಂದೆ ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ತಂತಿ ಬೇಲಿಗೆ ಗಣೇಶ್ ಮತ್ತು ಯೋಗೇಶ್ ವಿದ್ಯುತ್ ಹರಿಸಿದ್ದರು. ಆದರೆ ಕಾಡು ಹಂದಿಗೆ ಇಟ್ಟಿದ್ದ ವಿದ್ಯುತ್ ಹುಲಿಗೆ ತಗುಲಿ ಸ್ಥಳದಲ್ಲಿಯೇ ಹುಲಿ ಮೃತಪಟ್ಟಿದೆ.

 

ಹುಲಿ ಮೃತಪಟ್ಟಿರುವುದರ ಬಗ್ಗೆ ಯಾರಿಗೂ ಮಾಹಿತಿ ನೀಡದೇ, ಹುಲಿ ಉಗುರು ತೆಗೆದುಕೊಂಡು ಹುಲಿ ಕಲ್ಬೇರಳನ್ನು ಹೂತಿ ಹಾಕಿದ್ದರು. ಅಲ್ಲದೇ ವರ್ಷದ ಬಳಿಕ ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಸಂಚಾರಿ ಅರಣ್ಯ ದಳ ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ 17 ಹುಲಿ ಉಗುರು, ಒಂದು ಕೋರೆ ಹಲ್ಲು, ಚರ್ಮದ ಚೂರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಹುಲಿಯ ಹೂತ್ತಿರುವ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ.