Belagavi News In Kannada | News Belgaum

ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಏ.4ಕ್ಕೆ ಆಮ್ ಆದ್ಮಿ ಪಕ್ಷಕ್ಕೆ

ಬೆಂಗಳೂರು: ಬೆಂಗಳೂರು ಮೂಲದ ಹಿರಿಯ ಐಪಿಎಸ್ ಅಧಿಕಾರಿ ಬಿ. ಭಾಸ್ಕರರಾವ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದು, ಸೋಮವಾರ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದಾರೆ.

 

ಭಾರತೀಯ ಪೊಲೀಸ್ ಸೇವೆಗೆ ಸೇರಿದ್ದ ಭಾಸ್ಕರರಾವ್ ರೈಲ್ವೆ ಪೊಲೀಸ್ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 2021 ರಲ್ಲಿ ಸ್ವಯಂ ನಿವೃತ್ತಿ ಬಯಸಿ 2021 ಸೆಪ್ಟೆಂಬರ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಸರ್ಕಾರ ಕಳೆದ ವಾರವಷ್ಟೇ ಭಾಸ್ಕರರಾವ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಇದೀಗ ರಾಜಕೀಯ ಭವಿಷ್ಯ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.

 

ನವ ದೆಹಲಿಯ ದೀನ್ ದಯಾಳ್ ಉಪಧ್ಯಾಯ ಮಾರ್ಗದಲ್ಲಿರುವ ಎಎಪಿ ಪಕ್ಷದ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಎಎಪಿ ಸೇರಲಿದ್ದಾರೆ. ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್, ಎಎಪಿ ಹಿರಿಯ ಮುಖಂಡ ಮನೀಷ್ ಸಿಸೋಡಿಯಾ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

 

ರಾಜ್ಯದಲ್ಲಿ ಖ್ಯಾತಿ ಗಳಿಸಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಐಪಿಎಸ್ ಅಧಿಕಾರಿ ರೈಲ್ವೇ ಎಡಿಜಿಪಿ ಬಿ. ಭಾಸ್ಕರರಾವ್ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ.

 

ಸ್ವಯಂ ನಿವೃತ್ತಿ ಬಯಸಿ ಭಾಸ್ಕರರಾವ್ ಅರ್ಜಿಯನ್ನು ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಂಗೀಕರಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದರು. ಒಂದು ವಾರದ ಹಿಂದೆಷ್ಟೇ ರಾವ್ ಮನವಿ ಅಂಗೀಕರಿಸಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

 

ಹೊಸ ಪಯಣದ ಬಗ್ಗೆ ಭಾಸ್ಕರರಾವ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ನನ್ನ 32 ವರ್ಷಗಳ ಭಾರತೀಯ ಪೊಲೀಸ್ ಸೇವೆಗೆ ತೆರೆ ಎಳೆಯುತ್ತಿದ್ದೇನೆ. ನನ್ನ ಕುಟುಂಬಕ್ಕೆ, ಗೆಳೆಯರಿಗೆ, ಸಹೋದ್ಯೋಗಿಗಳಿಗೆ, ಹಿರಿಯ ಕಿರಿಯರಿಗೆ ಹಾಗೂ ಕರ್ನಾಟಕದ ಸರ್ಕಾರಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದರು. ಇದೀಗ ಆಮ್ ಆದ್ಮಿ ಸೇರ್ಪಡೆ ವಿಷಯ ಹೊರ ಬಿದ್ದಿದೆ.