Belagavi News In Kannada | News Belgaum

ರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ; ವಾಪಾಸ್ ಪಡೆಯಲು ರಾಮಲಿಂಗಾರೆಡ್ಡಿ ಆಗ್ರಹ

ಬೆಂಗಳೂರು: ರಾತ್ರೋ ರಾತ್ರಿ ಮಂಡಿಸಿರುವ ಬಿಬಿಎಂಪಿ ಬಜೆಟ್‌ ನ್ನು ಕೂಡಲೇ ವಾಪಸ್ ಪಡೆದು ಎಲ್ಲರ ಅಭಿಪ್ರಾಯ ಪಡೆದು ಪುನರ್ ಪರಿಶೀಲಿಸಿ ವಾಸ್ತವಿಕ ಬಜೆಟ್ ಮಂಡನೆ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಣಕಾಸು ವಿಚಾರದಲ್ಲಿ ಬಿಬಿಎಂಪಿಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಕಾನೂನು ಬಾಹಿರವಾಗಿ 10,460 ಕೋಟಿ ರೂ.ವರೆಗೆ ಬಜೆಟನ್ನು ಮಂಡಿಸಿದ್ದಾರೆ. ಈ ಕ್ರಮ ಸರಿಯಲ್ಲ. ಬೆಂಗಳೂರಿನ ಉಸ್ತುವಾರಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದೂ ಕಣ್ಣೆದುರಲ್ಲೇ ಈ ರೀತಿ ಅನ್ಯಾಯವಾಗಿದ್ದರೂ ಅವರ ಮೌನವಹಿಸಿರುವುದು ಸಂಜಸವಲ್ಲ. ಕೂಡಲೇ ಬಜೆಟ್ ಹಿಂಪಡೆದು ಪುನರ್ ಮಂಡಿಸಬೇಕೆಂದು ಅವರು ಹೇಳಿದರು.

ಕಳೆದ ಬಾರಿ ಕೋವಿಡ್‍ನಿಂದ ಆನ್‍ಲೈನ್‍ನಲ್ಲಿ ಬಜೆಟ್ ಮಂಡಿಸಲಾಗಿತ್ತು. ಆದರೆ, ಈ ಬಾರಿ ಕೋವಿಡ್ ಇಲ್ಲದಿದ್ದರೂ ರಾತ್ರೋರಾತ್ರಿ ಬಜೆಟ್ ಮಂಡಿಸಲು ಕಾರಣವೇನು ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

ಪಾಲಿಕೆಗೆ ಸಂಬಂಸಿದ ಮಾಹಿತಿ ಸಂಗ್ರಹಿಸಿಲ್ಲ. ಸಂಸ್ಥೆಗಳ ಅಭಿಪ್ರಾಯ ಕೇಳಲಿಲ್ಲ. 8500 ಕೋಟಿಗಿಂತ ಹೆಚ್ಚು ಬಜೆಟ್ ಮಂಡಿಸುವಂತಿಲ್ಲ. ಆದರೆ, ಈ ಬಾರಿ 10,460 ಕೋಟಿ ರೂ. ಬಜೆಟ್ ಮಂಡಿಸಿದ್ದಾರೆ. ಚುನಾಯಿತ ಜನಪ್ರತಿನಿಗಳು ಇಲ್ಲದಿದ್ದರೂ 1500 ಕೋಟಿ ರೂ.ಗಳ ಹೆಚ್ಚುವರಿಯಾಗಿ ಬಜೆಟ್ ಮಂಡಿಸಲಾಗಿದೆ ಎಂದು ಆರೋಪಿಸಿದರು.

ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ, ವಾರ್ಡ್ ಕಮಿಟಿಗಳ ಸಭೆ ನಡೆಸದೆ, ಯಾರ ಅಭಿಪ್ರಾಯವನ್ನೂ ಪಡೆಯದೆ ಕೆಲವು ಶಾಸಕರು ಮತ್ತು ಸಚಿವರ ಅಭಿಪ್ರಾಯವನ್ನಷ್ಟೇ ಪಡೆದು ಕಾನೂನು ಬಾಹಿರವಾಗಿ ಬಜೆಟ್ ಮಂಡಿಸಲಾಗಿದೆ ಎಂದು ಅವರು ಹೇಳಿದರು.

ಮಾಜಿ ಮೇಯರ್‍ಗಳಾದ ರಾಮಚಂದ್ರಪ್ಪ, ಜೆ.ಹುಚ್ಚಪ್ಪ, ಪದ್ಮಾವತಿ, ಗಂಗಾಂಬಿಕೆ ಮಲ್ಲಿಕಾರ್ಜುನ್, ಸಂಪತ್‍ರಾಜು, ಆಡಳಿತ ಪಕ್ಷದ ಮಾಜಿ ನಾಯಕರಾದ ಎಂ.ಶಿವರಾಜ್, ಮಾಜಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು./////