Belagavi News In Kannada | News Belgaum

ಸರ್ಕಾರಿ ನೌಕರರು ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ: ಡಾ.ಮಹೇಶ್

ಬೆಂಗಳೂರು:  ಕನ್ನಡ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು, ಸರ್ಕಾರಿ ನೌಕರರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕನ್ನಡ ಶಾಲೆ ಉಳಿಸಿ, ಕನ್ನಡ ಬೆಳೆಸಿ ಕುರಿತ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕ ಕನ್ನಡ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಹಾಗೂ ಸರ್ಕಾರಿ ನೌಕರರ ಮಕ್ಕಳು ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲೇ ನಡೆಸಬೇಕು. ಆಗ ಕನ್ನಡಬಲ್ಲವರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರು.
ಏಕೋಪಾಧ್ಯಾಯ ಕನ್ನಡ ಶಾಲೆಗಳು ಸಾಯುವಂತಾಗಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಶಾಲೆಯನ್ನು ತೆರೆಯಬೇಕು. ಇಂಗ್ಲೀಷ್ ಅಮಲಿನಲ್ಲಿ ಮಾತೃಭಾಷೆ ಕನ್ನಡವನ್ನು ಕೊಲ್ಲುವ ಪಾಪಕೃತ್ಯ ಮಾಡಬಾರದು ಎಂದು ಹೇಳಿದರು.

ಮಂಜೂರಾಗಿದ್ದ 1.75,726 ಶಿಕ್ಷಕರ ಹುದ್ದೆಗಳ ಪೈಕಿ 1,52,155 ಹುದ್ದೆಗಳು ಭರ್ತಿಯಾಗಿವೆ. 23,571 ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. 2010-11ರಿಂದ 2020-21ರ ಅವಯಲ್ಲಿ 2426 ಶಾಲೆಗಳು ಮುಚ್ಚಿವೆ. ಈ ಅವಯಲ್ಲಿ 12, 52,410 ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ಕನ್ನಡ ಶಾಲೆ ಉಳಿದರೆ ಕನ್ನಡ ಉಳಿಯುತ್ತದೆ, ಕನ್ನಡ ಉಳಿದರೆ ಕನ್ನಡಿಗರು ಉಳಿಯುತ್ತದೆ, ಕನ್ನಡಿಗರು ಉಳಿದರೆ ಕರ್ನಾಟಕ ಉಳಿಯುತ್ತದೆ ಎಂದರು.
ಹಲವು ವರದಿಗಳು ಮಾತೃಭಾಷೆಯಲ್ಲೇ ಶಿಕ್ಷಣ ನೀಡುವಂತೆ ಶೀಫಾರಸ್ಸು ಮಾಡಿವೆ. ಹೀಗಾಗಿ ಇರುವ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಹುಕ್ಕೇರಿ ಮಹಾಸಂಸ್ಥಾನದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಕನ್ನಡವನ್ನು ಕನ್ನಡಕ ಮಾಡಿಕೊಳ್ಳದೆ ಕಣ್ಣಾಗಿಸಬೇಕಿದೆ. 20 ವರ್ಷದ ಹಿಂದೆಯೇ ಇಂತಹ ದುಂಡುಮೇಜಿನ ಸಭೆ ಆಗಬೇಕಿತ್ತು. ಆಡಳಿತಾರೂಢ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಸಾರ್ಥಕವಾಗುತ್ತದೆ. ಇದಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಒಳ್ಳೆಯ ಶಿಕ್ಷಕರಿಗೆ ಇದ್ದರೆ ಕನ್ನಡ ಶಾಲೆ ಮುಚ್ಚಬೇಕಿಲ್ಲ.

ಶಿಕ್ಷಣದ ಗುಣಮಟ್ಟವೂ ಹೆಚ್ಚಿಸಬೇಕು. ಈ ಸಂಬಂಧ ಸಾಹಿತಿಗಳು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕನ್ನಡ ಶಾಲೆ ಉಳಿಸಿಬೆಳೆಸುವ ಕೆಲಸ ಮಾಡಬೇಕು ಎಂದರು.

ನಿಡುಮಾಮಿಡಿ ಮಹಾಸಂಸ್ಥಾನದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಪ್ರತಿಹಳ್ಳಿಯಲ್ಲೂ ಆಂಗ್ಲಮಾಧ್ಯಮ ಶಾಲೆ ತಲೆ ಎತ್ತಿವೆ. ಇದರಿಂದ ಕನ್ನಡ ಶಾಲೆಗಳು ಸೊರಗುವಂತಾಗಿದೆ. ನರ್ಸರಿಯಿಂದ 10ನೇ ತರಗತಿವರೆಗೂ ಖಾಸಗಿ ಶಾಲೆಗಳಲ್ಲಿ ಸುಲಿಗೆ ನಡೆಯುತ್ತಿದೆ. ಬಹುಪಾಲು ರಾಜಕಾರಣಿಗಳು, ಅಧಿಕಾರಿಗಳೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದು, ಪರೋಕ್ಷವಾಗಿ ಸರ್ಕಾರವೂ ಉತ್ತೇಜನ ನೀಡುತ್ತಿದೆ.

ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಿದರೆ ಮುಚ್ಚುವ ಪರಿಸ್ಥಿತಿ ಇರುವುದಿಲ್ಲ ಕನ್ನಡ ಕಲಿತರೆ ಉದ್ಯೋಗ ದೊರೆಯುತ್ತದೆ. ಕನ್ನಡದಲ್ಲಿ ಸಿಇಟಿ ನಡೆಸಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಇಟಿ ಸೀಟುಗಳಲ್ಲಿ ಶೇ.50ರಷ್ಟು ಮೀಸಲು ಇಡಬೇಕು. ಎಂಜಿನಿಯರ್, ವೈದ್ಯಕೀಯ ಶಿಕ್ಷಣ ಕನ್ನಡ ಮಾಧ್ಯಮಗಳಲ್ಲಿ ಸಿಗುವಂತಾಗಬೇಕು. ಏಕರೂಪ ಶಿಕ್ಷಣದ ಬಗ್ಗೆ ಸರಿಯಾಗಿ ಇನ್ನೂ ನಿರ್ಧಾರವಾಗಿಲ್ಲ. ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸುವಂತಾಗಬೇಕು ಎಂದು ಹೇಳಿದರು.

ಹಿರಿಯ ವಿದ್ವಾಂಸ ಪ್ರಧಾನ ಗುರುದತ್ತ ಮಾತನಾಡಿ, ಅಗತ್ಯಬಿದ್ದರೆ ಮಾತೃಭಾಷೆ ಮಾಧ್ಯಮ ಶಿಕ್ಷಣಕ್ಕಾಗಿ ಸಂವಿಧಾನಕ್ಕೆ ತುರ್ತಾಗಿ ತಿದ್ದುಪಡಿ ತರಬೇಕಿದೆ. ಕನ್ನಡ ಶಾಲೆ ಉಳಿಸುವ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹಿರಿಯ ಸಾಹಿತಿ ಡಾ.ಎಸ್.ಎಲ್.ಬೈರಪ್ಪ, ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕೋಶಾಧ್ಯಕ್ಷ ಪಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ ಸೇರಿದಂತೆ ವಿದ್ವಾಂಸರು, ಅಂಕಣಕಾರರು, ಶಿಕ್ಷಣ ತಜ್ಞರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದರು//////