Belagavi News In Kannada | News Belgaum

ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದ ನಂಬಿಕೆ ಇಟ್ಟಿದೆ

ಹುಬ್ಬಳ್ಳಿ: ದೇಶದ ಜಾತ್ಯತೀತ ತತ್ವವನ್ನು ಉಳಿಸುವುದು ನಮ್ಮ ಕರ್ತವ್ಯ. ಕಾಂಗ್ರೆಸ್ ಪಕ್ಷ ಎಲ್ಲ ಧರ್ಮಗಳ ಜನರಿಗೆ ರಕ್ಷಣೆ ಕೊಡುತ್ತದೆ. ನಮಗೆ ಮಾನವೀಯತೆಯಲ್ಲಿ ನಂಬಿಕೆ ಇದ್ದರೆ, ಬಿಜೆಪಿ ಮನುವಾದದಲ್ಲಿ ನಂಬಿಕೆ ಇಟ್ಟಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಜನರ ಮುಂದೆ ತಮ್ಮ ಸಾಧನೆಗಳ ಬಗ್ಗೆ ಮಾತನಾಡಲು ಅವರ ಬಳಿ ಸಾಧನೆಗಳೇ ಇಲ್ಲ. ಸರ್ಕಾರದ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅದನ್ನು ಮುಚ್ಚಿಡಲು ಹಿಜಬ್, ಹಲಾಲ್, ಮಸೀದಿಗಳ ಧ್ವನಿವರ್ಧಕ ಮುಂತಾದ ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ. ಈಗ ಮಾವಿನ ಹಣ್ಣಿನ ವ್ಯಾಪಾರ ಮಾಡುವ ವಿಚಾರದಲ್ಲೂ ವಿವಾದ ಸೃಷ್ಟಿಸಿದ್ದಾರೆ. ಹಲವಾರು ವರ್ಷಗಳಿಂದ ಹಿಂದೂ-ಮುಸ್ಲಿಮರು ಪರಸ್ಪರ ಹೊಂದಾಣಿಕೆ, ಸಹಕಾರದಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ನಮ್ಮ ಮೈಸೂರು ಭಾಗದಲ್ಲಿ ಮಾವಿನ ತೋಟ ಇದ್ದವರು ಮುಸ್ಲಿಂ ವರ್ತಕರಿಗೆ ಮಾವಿನ ಹಣ್ಣನ್ನು ಮಾರುತ್ತಿದ್ದರು. ಇಂಥದ್ದಕ್ಕೆಲ್ಲ ಅಡ್ಡ ಬರುತ್ತಾರೆ ಎಂದರೆ ಏನರ್ಥ? ಬಿಜೆಪಿಯವರು ಚುನಾವಣೆಗಾಗಿ ಸಮಾಜ ವಿಭಜಿಸಿ ಮತಗಳ ಕ್ರೋಢೀಕರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಂಥ ಧಾರ್ಮಿಕ ಆಚರಣೆ, ನಂಬಿಕೆಗಳನ್ನು ವಿವಾದ ಮಾಡುತ್ತಾ ಹೋದರೆ ಮುಂದೆ ಬಿಜೆಪಿಗೆ ಇದು ತಿರುಗುಬಾಣವಾಗುತ್ತೆ. ಜನರಿಗೆ ಇವರ ಹುನ್ನಾರ ಅರ್ಥವಾಗಿದೆ, ಜನ ಬೇಸತ್ತಿದ್ದಾರೆ. ಯಾರಾದರೂ ಮಾವಿನಹಣ್ಣಿನ ವ್ಯಾಪಾರಕ್ಕೂ ಅಡ್ಡ ಬರುತ್ತಾರಾ? ಜಾತ್ರೆಗಳಲ್ಲಿ ಹಿಂದೂ ಮುಸ್ಲಿಮರು ವ್ಯಾಪಾರ ಮಾಡುತ್ತಾ ಬಂದಿದ್ದರು. ಅದಕ್ಕೂ ನಿರ್ಬಂಧ ಮಾಡುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಹಲಾಲ್ ನಡೆದುಕೊಂಡು ಬಂದಿದೆ. ನಾವು ಕೂಡ ಹಲಾಲ್ ಮಾಂಸ ತಿಂದಿದ್ದೇವೆ. ಯಾರೋ ಮಾಂಸ ತಿನ್ನದವರು ಮಾಂಸ ತಿನ್ನುವ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಸರ್ಕಾರ ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಕಳೆದ ಹದಿನೈದು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 9 ರೂಪಾಯಿ ಜಾಸ್ತಿಯಾಗಿದೆ. ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಹೋಟೆಲ್ ತಿಸಿಸು, ಜನೌಷಧ, ವಿದ್ಯುತ್ ದರ ಮುಂತಾದವುಗಳ ಬೆಲೆ ಜಾಸ್ತಿಯಾಗಿದೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡಲ್ಲ. ಇವೆಲ್ಲ ಜನರ ಜೀವನಕ್ಕೆ ಸಂಬಂಧಪಟ್ಟವು. ಈ ವಿಚಾರಗಳು ಚರ್ಚೆಯಾಗಬೇಕು. ಜನರ ಜೀವನಕ್ಕೆ ಸಂಬಂಧಿಸದ ವಿಚಾರಗಳನ್ನು ಮಾತನಾಡಿ ಅವರ ಧಾರ್ಮಿಕ ಭಾವನೆಗಳನ್ನು ಕೆರೆಳಿಸುವುದು ಖಂಡನೀಯವಾದುದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾರದ್ದೇ ಕೊಲೆಯಾದರೂ ನಾನು ಖಂಡಿಸುತ್ತೇನೆ. ಅದು ಹಿಂದೂವಾಗಿರಲಿ, ಮುಸ್ಲಿಂ ಆಗಿರಲಿ. ಯಾರೇ ಸತ್ತರೂ ಅದು ಒಂದು ಜೀವವಲ್ಲವೇ? ಶಿವಮೊಗ್ಗದ ಹರ್ಷನ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದೀನಿ. ಈ ಗೃಹ ಸಚಿವರಿಗೆ ಅನುಭವವೂ ಇಲ್ಲ, ಗೃಹ ಇಲಾಖೆಯನ್ನು ನಿಭಾಯಿಸುವ ಸಾಮರ್ಥ್ಯವೂ ಇಲ್ಲ. ನರಗುಂದದಲ್ಲಿ ಕೊಲೆಯಾದ ಸಮೀರ್ ಎಂಬ ಯುವಕನಿಗೆ ಸರ್ಕಾರ ಪರಿಹಾರ ಕೊಟ್ಟಿದೆಯಾ? ಬೆಳ್ತಂಗಡಿಯಲ್ಲಿ ಭಜರಂಗದಳದ ಕಾರ್ಯಕರ್ತರನಿಂದ ಕೊಲೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಪರಿಹಾರ ನೀಡಿದ್ದಾರಾ? ಹರ್ಷ, ದಿನೇಶ್, ಸಮೀರ್ ಎಲ್ಲರೂ ಮನುಷ್ಯರೆ ಎಂದು ತಿಳಿಸಿದ್ದಾರೆ.

ನಾವು ಬಿಜೆಪಿಯ ದುರಾಡಳಿತವನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಹಿಂದುತ್ವದ ಹೆಸರೇಳಿಕೊಂಡು ದ್ವೇಷ ಹರಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ಜನರಿಗೆ ಅರ್ಥ ಮಾಡಿಸುತ್ತೇವೆ. ಜನ ಮೋಸ ಹೋಗಬಾರದು ಎಂಬುದು ನಮ್ಮ ಕಾಳಜಿ ಎಂದಿದ್ದಾರೆ.//////