Belagavi News In Kannada | News Belgaum

ಪ್ರಿಯತಮೆಗಾಗಿ ಗೆಳೆಯನ ಮನೆಗೆ ಕನ್ನ: ಆರೋಪಿ ಅರೆಸ್ಟ್

ಬೆಂಗಳೂರು: ಪ್ರೀತಿಸಿದ ಹುಡುಗಿಗೆ ಖರ್ಚು ಮಾಡಲು ಹಾಗೂ ವಿಲಾಸಿ ಜೀವನ ನಡೆಸಲು ಪರಿಚಯವಿದ್ದವರ ಮನೆಯಲ್ಲೇ ಕಳ್ಳತನ ಮಾಡಿದ ಯುವಕನನ್ನು ಕೆಪಿ ಅಗ್ರಹಾರ ಠಾಣೆ ಪೊಲೀಸರು ಬಂಸಿ, 4.90 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಜಯ ನಗರದ ಕೆಫೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೆಪಿ ಅಗ್ರಹಾರ ನಿವಾಸಿ ನವೀನ್ ಕುಮಾರ್ ಬಂಧಿತ ಆರೋಪಿ.

ನವೀನ್ ಅವರ ತಾಯಿಗೆ ಈತ ಕಳವು ಮಾಡಿದ ಮನೆ ಮಾಲೀಕ ಶಿವಶಂಕರಯ್ಯ ಪತ್ನಿ ಪರಿಚಯಸ್ಥರಾಗಿದ್ದರು. ಇಬ್ಬರ ಮನೆಯೂ ಒಂದೇ ಏರಿಯಾದಲ್ಲಿತ್ತು. ಹಾಗಾಗಿ ಶಿವಶಂಕರಯ್ಯ ಮನೆಗೆ ಆಗಾಗ ನವೀನ್‍ಕುಮಾರ್ ಬಂದು ಹೋಗುತ್ತಿದ್ದ. ಅದೇ ರೀತಿ ಮಾರ್ಚ್ 11 ರಂದು ಶಿವಶಂಕರಯ್ಯ, ಮನೆಯಲ್ಲಿ ಯಾರು ಇಲ್ಲದಿರುವ ಸಮಯ ನೋಡಿಕೊಂಡು ಮನೆಯಲ್ಲಿದ್ದ 109 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾನೆ.

ಆದರೆ, ಮನೆಯಲ್ಲಿ ಆಭರಣ ಕಳುವಾಗಿರುವುದು ಮನೆಯವರ ಗಮನಕ್ಕೆ ಬಂದಿರಲಿಲ್ಲ. ಇತ್ತೀಚೆಗೆ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಒಡವೆ ಹಾಕಿಕೊಳ್ಳಲು ನೋಡಿದಾಗ ಕಾಣೆಯಾಗಿರುವುದು ಅರಿವಿಗೆ ಬಂದಿದೆ. ನಂತರ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಆಗಾಗ ಮನೆಗೆ ಬರುತ್ತಿದ್ದ ನವೀನ್ ಮೇಲೆ ಮನೆ ಮಾಲೀಕರು ಶಂಕೆ ವ್ಯಕ್ತಪಡಿಸಿದ್ದರು.

ಸಿಸಿಟಿವಿ ದೃಶ್ಯಾವಳಿ ಆಧರಿಸಿ ಈ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಮನೆಗೆ ಬೀಗ ಹಾಕದೆ ಇದ್ದ ಸಮಯ ನೋಡಿಕೊಂಡು ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾನೆ. ಪ್ರೀತಿಸಿದ ಹುಡುಗಿಗಾಗಿ ಹಾಗೂ ಮೋಜಿನ ಜೀವನ ನಡೆಸಲು ಈ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ.

ಆರೋಪಿ ನವೀನ್‍ನಿಂದ ಒಟ್ಟು 4.90 ಲಕ್ಷ ಬೆಲೆ ಬಾಳುವ 109 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೆಪಿ ಅಗ್ರಹಾರ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸದಾನಂದ.ಎಂ. ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ./////