Belagavi News In Kannada | News Belgaum

ಬದುಕಿನ ಜಂಜಾಟದಿಂದ ಮುಕ್ತರಾಗಲು ಸಂಗೀತ ಜೀವಾಮೃತ: ಅಮರಸಿದ್ದೇಶ್ವರ ಮಹಾಸ್ವಾಮಿಗಳು

ಗೋಕಾಕ: ಸಂಗೀತವು ಸಮಸ್ತ ಜೀವರಾಶಿಗಳಿಗೆ ಜೀವಾಮೃತವನ್ನು ನೀಡುತ್ತದೆ ಎಂದು ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಶನಿವಾರ ಗೋಕಾಕ ತಾಲೂಕು ಪತ್ರಕರ್ತ ಸಂಘ ಹಾಗೂ ರಾಹುಲ್ ಸೊಂಟಕ್ಕಿ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ನೋವುಗಳನ್ನು ಮರೆಸುವ ಔಷಧಿ ಸಂಗೀತದಲ್ಲಿದೆ. ಸರ್ವ ರೋಗಕ್ಕೂ ಸಂಗೀತ ಮದ್ದು ಎನ್ನುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ತುಂಬಾ ನೋವಾದಾಗ, ಜೀವನದಲ್ಲಿ ಜಿಗುಪ್ಸೆಯಾದಾಗ ಸಂಗೀತ ಕೇಳಿದರೆ ಮನಸ್ಸು ಪ್ರಫುಲ್ಲ ಆಗುತ್ತದೆ ಎಂದರು.

ಕನ್ನಡ ನಾಡಿನ ಸಾಹಿತ್ಯ ಮತ್ತು ಸಾಂಸ್ಕಂತಿಕ ಕ್ಷೇತ್ರಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅನನ್ಯವಾದುದು. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಕಲಾವಿದರು ಇದ್ದಾರೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಗೋಕಾಕ ಕಲಾವಿದರನ್ನು ಆರಾಧಿಸುವ ಹಾಗೂ ಕಲಾವಿದರು ಇರುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಬೆಳಗಾವಿ ಹಾಗೂ ಗೋಕಾಕ ಕೊಡುಗೆ ಅಪಾರವಾಗಿದೆ ಎಂದರು.

ಗೋಕಾಕ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಗೀತಕ್ಕೆ ಇನ್ನೊಂದು ಹೆಸರು ದೇವಭಾಷೆ. ಎಲ್ಲಾ ಕಲೆಗಳಿಗಿಂತ ಸಂಗೀತವು ಅತ್ಯಂತ ಶ್ರೇಷ್ಠವಾದ ಕಲೆ ಎಂದು ಬಣ್ಣಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ, ಬಿಜೆಪಿ ನಗರ ಘಟಕ ಅಧ್ಯಕ್ಷ, ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಭೀಮಶಿ ಭರಮಣ್ಣವರ, ಗೋಕಾಕ ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಮ್ಯಾಗೇರಿ, ರಾಹುಲ ಸೊಂಟಕ್ಕಿ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ ಸೊಂಟಕ್ಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಸಾಧಕರಾದ ನಿರಂಜನ ಬನ್ನಿಶೆಟ್ಟಿ, ಮೋಹನ ಡಿ.ಆರ್., ರಾಘು ಹೊಸಮನಿ, ಸಚೀನ ಸಮಯ, ಸಂಜು ಖನಗಾಂವಿ, ಶ್ರೀಕಾಂತ ರತನ್, ಶ್ರವಣ ಮನ್ನಿಕೇರಿ, ಪ್ರಶಾಂತ ಕುರಬೇಟ, ಬಾಬುಲಾಲ, ಜಾವೇದ ಗೋಕಾಕ, ಸುನೀಲ ಮಾಂಗಲೇಕರ, ಯುಸೂಫ ಫಿರಜಾದೆ, ಪವನ ಮಹಾಲಿಂಗಪುರ ಅವರನ್ನು ಸನ್ಮಾನಿಸಲಾಯಿತು. ರಮೇಶ ಸಾವಳಗಿ, ಯಲ್ಲೇಶಕುಮಾರ ನಿರೂಪಿಸಿದರು.///////