Belagavi News In Kannada | News Belgaum

ಸಿಎಂ ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆ: ಸಿದ್ದರಾಮಯ್ಯ

ಬೆಂಗಳೂರು: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನ ಕಾಯಿ ಒಡೆದು ಹಾಕಿದ ಶ್ರೀ ರಾಮ ಸೇನೆ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಈಗಿನದ್ದು ಆಡುವ ಗೊಂಬೆಯ ಸರ್ಕಾರ. ಆ ಕೂಸುಗಳಿಗೆ ಜೀವವಾದರೂ ಇತ್ತು. ಈಗಿನದ್ದು ಸಂಪೂರ್ಣ ನಿರ್ಜೀವ ಆಟದ ಗೊಂಬೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆಯಂತಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಸಂಘ ಪರಿವಾರದ ಜೊತೆಗಿನ ಸಹಯೋಗದಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹರಡುತ್ತಿರುವ ಕೋಮುದ್ವೇಷದ ವಾತಾವರಣದಿಂದ ರಾಜ್ಯದ ಉದ್ಯಮಿಗಳು ಬೇಸತ್ತು ಹೊರ ರಾಜ್ಯದ ಕಡೆಗೆ ಮುಖ ಮಾಡುತ್ತಿದ್ದಾರೆ. ಕಿರಣ್ ಮಜುಂದಾರ್ ಶಾ ಅವರಂತಹ ಖ್ಯಾತನಾಮರು ಕೂಡಾ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿರುವುದು ಕಳವಳಕಾರಿ ಬೆಳವಣಿಗೆ ಎಂದಿದ್ದಾರೆ.
ಬೀದಿಗೂಂಡಾಗಳ ಪುಂಡಾಟಿಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸರ್ಕಾರ ಸಮರ್ಥಿಸಿಕೊಂಡ ನಂತರವೇ ಕೊಲೆ, ಹಿಂಸಾಚಾರ, ಗಲಾಟೆ, ದೌರ್ಜನ್ಯಗಳ ಹೊಸ ಸರಣಿ ಪ್ರಾರಂಭವಾಗಿದ್ದು, ಇದರಿಂದ ಕಾನೂನು ಸುವ್ಯವಸ್ಥೆೇ ಕುಸಿದು ಬಿದ್ದು ನಾಗರಿಕ ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಕೀಯ ದುರುದ್ದೇಶದಿಂದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರ ನಡೆಸುತ್ತಿರುವ ಪುಂಡಾಟಿಕೆಗಳಿಂದಾಗಿ ಹೊರ ರಾಜ್ಯ ಮತ್ತು ಹೊರ ದೇಶಗಳ ಎದುರು ಕೂಡು ಬಾಳ್ವೆಗೆ ಹೆಸರಾದ ಶಾಂತಿ ಮತ್ತು ಸೌಹಾರ್ದ ಪ್ರಿಯ ಕನ್ನಡಿಗರು ತಲೆತಗ್ಗಿಸುವಂತಾಗಿದೆ. ಇದನ್ನು ಕನ್ನಡಿಗರು ಎಂದಿಗೂ ಕ್ಷಮಿಸರು ಎಂದು ವಿಪಕ್ಷ ನಾಯಕ ಟೀಕಿಸಿದ್ದಾರೆ./////