ಓದಿಗೆ ಬಡತನ ಅಡ್ಡಿ ಬಾರದು: ಡಿಸಿಪಿ ರವೀಂದ್ರ ಗಡಾದಿ

ಓದಿಗೆ ಬಡತನ ಅಡ್ಡಿ ಬಾರದು: ಡಿಸಿಪಿ ರವೀಂದ್ರ ಗಡಾದಿ
ಎಸ್ಸಿ, ಎಸ್ಟಿ ಗೆಜಿಟೆಡ್ ಅಧಿಕಾರಿಗಳ ಚಾರಿಟೇಬಲ್ ಫೌಂಡೇಶನ್ ನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ-ಪ್ರೇರಣಾ ಕಾರ್ಯಕ್ರಮ
ಬೆಳಗಾವಿ: ಓದಿಗೆ ಬಡತನ ಅಡ್ಡಿ ಬಾರದು, ಯಾವುದೇ ಕೆಲಸ ಮಾಡಿದರೂ ಅದನ್ನು ಪರಿಪೂರ್ಣವಾಗಿ ಮಾಡುವುದನ್ನು ವಿದ್ಯಾರ್ಥಿಗಳು ಕಲಿಯಬೇಕೆಂದು ಡಿಸಿಪಿ ರವೀಂದ್ರ ಗಡಾದಿ ಕರೆ ನೀಡಿದರು.
ಇಲ್ಲಿನ ಸದಾಶಿವ ನಗರದ ಅಂಬೇಡ್ಕರ್ ಭವನದಲ್ಲಿ ಎಸ್ಸಿ, ಎಸ್ಟಿ, ಗೆಜಿಟೆಡ್ ಅಧಿಕಾರಿಗಳ ಚಾರಿಟೇಬಲ್ ಫೌಂಡೇಶನ್ ಬೆಳಗಾವಿ ಇವರು ಹಮ್ಮಿಕೊಂಡಿದ್ದ ಎಸ್ಸಿ, ಎಸ್ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರೇರಣಾ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಮಾತನಾಡಿದರು.
ನೆಗಟಿವ್ ವಿಚಾರ ಬಿಟ್ಟಾಗ ಮಾತ್ರ ಜೀವನದಲ್ಲಿ ಮುಂದೆ ಬರಲು ಸಾಧ್ಯವಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದಾಗೆ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಪ್ರಗತಿ ಹೊಂದಲು ಸಹಾಯವಾಗುತ್ತೆ ಎಂದರು.
ವಿದ್ಯಾರ್ಥಿಗಳು ಭಾಷೆ, ಸಂಸ್ಕೃತಿ ಜತೆ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಮುಂದೆ ಬಂದವರು ಹಿಂದೆ ಉಳಿದವರನ್ನು ಮುನ್ನಡೆಗೆ ತೆಗೆದುಕೊಂಡು ಹೋಗಬೇಕು. ಓದಿನ ಜತೆ ಆರೋಗ್ಯಕ್ಕೂ ಗಮನ ನೀಡಬೇಕೆಂದು ಸಲಹೆ ನೀಡಿದರು.
ದೇವರ ಹೆಸರಲ್ಲಿ ಪ್ರಾಣಿ ಬಲಿ ನೀಡುವುದನ್ನು ಕೈ ಬಿಡಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಪುಸ್ತಕಗಳನ್ನು ಓದುವ ಜತೆ ದಿನಪತ್ರಿಕೆಗಳನ್ನು ಓದಲು ರೂಢಿಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಲು ಹೆಚ್ಚಿನ ಸಮಯ ನೀಡಬೇಕೆಂದು ತಿಳಿಸಿದರು.
ಮುಂದೆ ಗುರಿ, ಹಿಂದೆ ಗುರು ಇರಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಮೊದಲು ನಮ್ಮವರನ್ನು ನಾವು ಗೌರವಿಸುವುದು ಕಲಿಯಬೇಕು. ಮೊಬೈಲ್ ಬಳಕೆ ಒಳ್ಳೆಯ ಉದ್ದೇಶಕ್ಕೆ ಮಾತ್ರ ಸೀಮಿತವಾಗಲಿ, ಕನ್ನಡ ಜತೆ ಇಂಗ್ಲಿಷ್ ಭಾಷೆಯ ಬಗ್ಗೆಯೂ ಹೆಚ್ಚಿನ ಜ್ಞಾನ ಪಡೆದುಕೊಳ್ಳಿ ಎಂದು ಸೂಚಿಸಿದರು.
ಎಸ್ಸಿ, ಎಸ್ಟಿ, ಗೆಜಿಟೆಡ್ ಅಧಿಕಾರಿಗಳ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷರಾದ ಎಸ್.ಆರ್. ಖೋಕಾಟೆ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗೆ ನಾವು ಸದಾ ಸ್ಪಂದಿಸುತ್ತಿದ್ದು, ನಿಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತನ್ನಿ. ಯಾವುದೇ ಕ್ಷೇತ್ರದಲ್ಲಿ ನಿಮಗೆ ನೌಕರಿ ಸಿಕ್ಕರೆ ಪಡೆದು ಪ್ರಗತಿ ಕಾಣಬೇಕೆಂದು ತಿಳಿಸಿದರು.
ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಾದ ನೀವು ಐಎಎಸ್, ಐಪಿಎಸ್ ನಂತ ಉನ್ನತ ಹುದ್ದೆಗಳನ್ನು ಪಡೆದರೆ ನಮ್ಮಷ್ಟು ಸಂತೋಷ ಪಡುವವರು ಯಾರು ಇಲ್ಲ. ಜತೆಗೆ ಇಂದು ನಾವು ಧರ್ಮವನ್ನು ಕಟ್ಟಬೇಕಾಗಿದೆ. ನಮ್ಮಲ್ಲಿ ಸಂಘಟಿತರಾಗಬೇಕಿದೆ ಎಂದರು.
ಇನ್ನೋರ್ವ ಫೌಂಡೇಶನ್ ಸದಸ್ಯ ಎಂ.ಡಿ. ಕಾಂಬಳೆ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಮೌಢ್ಯತೆ ವಿರುದ್ಧ ಸಮಾಜದ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ದೇವರ ಹೆಸರಿನಲ್ಲಿ ಕೆಲವು ಅಂಧ ಆಚರಣೆಗಳನ್ನು ಮಾಡಬಾರದು ಎಂದು ವಿದ್ಯರ್ಥಿಗಳಿಗೆ ಕರೆ ನೀಡಿದರು.
ನಿವೃತ್ತ ಅಸ್ಟಿಟೆಂಟ್ ಕಮಿಷನರ್ ಆಫ್ ಕಸ್ಟಮ್ಸ್ & ಜಿಎಸ್ಟಿ ಹಾಗೂ ಎಸ್ಸಿ, ಎಸ್ಟಿ, ಗೆಜಿಟೆಡ್ ಅಧಿಕಾರಿಗಳ ಚಾರಿಟೇಬಲ್ ಫೌಂಡೇಶನ್ ಸದಸ್ಯರಾದ ಲಕ್ಷ್ಮಣ ಆರ್. ಕಾಂಬಳೆ ಅತಿಥಿಗಳನ್ನು ಪರಿಚಯಿಸಿದರು. ನಿವೃತ್ತ ಡಿವೈಎಸ್ಪಿ ಗಿರೀಶ್ ಕಾಂಬಳೆ ಅವರ ಸ್ವ-ರಚಿತ ಬುದ್ದ ಮತ್ತು ಭೀಮ ವಂದನೆಗಳನ್ನು ಸಂಗಡಿಗರೊಂದಿಗೆ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮಕ್ಕೂ ಮೊದಲು ಡಾ.ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಹೂವಿನ ಹಾರವನ್ನು ಹಾಕಿ ನಮಿಸಲಾಯಿತು. ಇದೇ ವೇಳೆ ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾಲಯದ 35 ಪ್ರತಿಭಾವಂತ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಸಹಾಯ ಧನ ಸೇರಿದಂತೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಮಿಷನ್ ಪುಸ್ತಕ ವಿತರಿಸಿ ಫೌಂಡೇಶನ್ ವತಿಯಿಂದ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾದ ಆರ್.ಸಿ.ಯು ಸಹಾಯಕ ರಿಜಿಸ್ಟ್ರಾರ್ ಶ್ರೀನಿವಾಸ್, ಆರ್.ಸಿ.ಯು ವಾಣಿಜ್ಯ ವಿಭಾಗದ ಡೀನ್ ಎಚ್ ವೈ.ಕಾಂಬಳೆ, ಎಸ್ಸಿ, ಎಸ್ಟಿ, ಗೆಜಿಟೆಡ್ ಅಧಿಕಾರಿಗಳ ಚಾರಿಟೇಬಲ್ ಫೌಂಡೇಶನ್ ಉಪಾಧ್ಯಕ್ಷ, ನಿವೃತ್ತ ವರಿಷ್ಠಾಧಿಕಾರಿ ಬಿ.ಎನ್. ಶೆಟ್ಟಣ್ಣನವರ್, ಸದಸ್ಯರಾದ ಸಿ.ಆರ್. ವಿನಾಯಕ್, ಜಿ.ಆರ್. ಕಾಂಬಳೆ, ಡಿ.ಎಂ.ಸಿಂಗೆಗೊಳ್, ವೈ.ಪಿ. ಗಾಡಿನಾಯಕ್, ಶೇಖರ್ ಸಿಂಗೆ, ವಿ.ಆರ್. ಕಲ್ಲಣ್ಣನವರ್, ಸಂಜೀವ ಕಾಂಬಳೆ, ರಾಣಿ ಚೆನ್ನಮ್ಮಾ ವಿ.ವಿ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.