Belagavi News In Kannada | News Belgaum

ಆರೋಪಿ ಬೇಕಂತ ಕೊಲೆ ಮಾಡಿಲ್ಲ, ನರ ಕಟ್ ಆಗದೇ ಇದ್ದಿದ್ರೆ ಚಂದ್ರು ಸಾಯ್ತಿರಲಿಲ್ಲ: ಜಮೀರ್

ಜೆಜೆ ನಗರದ ಚಂದ್ರು ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆಯು ಇದೀಗ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಶಾಸಕರೇ ಹಂತಕರ ಪರವಾಗಿ ನಿಂತಿದ್ದಾರೆ ಎನ್ನುವ ಆರೋಪಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ.

ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಂದ್ರುವನ್ನು ಕೊಲೆ ಮಾಡಿದ ಆರೋಪಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ಚಾಕುವಿನಿಂದ ಚುಚ್ಚಿದಾಗ ನರ ಕಟ್ಟಾಗಿ ಸತ್ತುಹೋದನಂತೆ. ಹಾಗಾದ ಮಾತ್ರಕ್ಕೆ ಸುಮ್ಮನಾಗಬೇಕಿಲ್ಲ. ಅವನು ಮಾಡಿದ ತಪ್ಪಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ.

ಚಂದ್ರುವಿನ ತೊಡೆಯ ಭಾಗಕ್ಕೆ ಚಾಕು ಚುಚ್ಚಿದ್ದನಂತೆ. ಇದರಿಂದ ಯಾವುದೋ ನರ ಕಟ್ಟಾಗಿ ರಕ್ತಸ್ರಾವವಾಗಿದೆ. ಇಲ್ಲದಿದ್ದರೆ ಚಂದ್ರು ಸಾಯುತ್ತಿರಲಿಲ್ಲ. ವಿಕ್ಟೋರಿಯ ಆಸ್ಪತ್ರೆಗೆ ಕರದುಕೊಂಡು ಹೋಗಿದ್ದಾರೆ ಅಷ್ಟರಲ್ಲಿ ರಕ್ತಸ್ರಾವದಿಂದ ಸತ್ತು ಹೋಗಿದ್ದಾನೆ ಎಂದು ತಿಳಿಸಿದ್ದಾರೆ.

ಯಾವಾಗ್ಲೂ ಗಲಾಟೆ ಮಾಡೋದು ರಾಜಕಾರಣಿನೇ. ಆದರೆ ಗಲಾಟೆಯಲ್ಲಿ ಯಾವುದಾದರೂ ರಾಜಕಾರಣಿ ಸತ್ತಿದ್ದು ನೋಡಿದ್ದೀರಾ….? ಗಲಾಟೆಯಲ್ಲಿ ಯಾವ ರಾಜಕಾರಣಿನೂ ಸತ್ತಿಲ್ಲ. ಅವರು ಎಸಿ ರೂಮಲ್ಲಿ ಅರಾಮಾಗಿ ಇರ್ತಾನೆ ಎಂದು ಟೀಕಿಸಿದ್ದಾರೆ.

ನಾವು ಪಾಕಿಸ್ತಾನದ ಮುಸ್ಲಿಮರಲ್ಲ: ಶಾಂತಿ ಸಹಬಾಳ್ವೆ ನಮ್ಮ ಮೊದಲ ಆದ್ಯತೆ ಆದರೆ, ಸಾವಿನ ಮನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಚಾಮರಾಜಪೇಟೆಯಲ್ಲಿ ನಾನು ಶಾಸಕನಾಗಿರುವುದಕ್ಕಿಂತ ಮುಂಚೆ ಒಂದಲ್ಲ ಒಂದು ರೀತಿಯಲ್ಲಿ ಗಲಭೆಗಳು ನಡೆಯುತಿತ್ತು ಎಂದಿದ್ದಾರೆ.

ನಾನು ಶಾಸಕನಾದ ಮೇಲೆ ಒಂದೇ ಒಂದು ಗಲಭೆಗಳೂ ಇಲ್ಲಿ ನಡೆದಿಲ್ಲ. ಚಂದ್ರುವಿನ ಕೊಲೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಕ್ಷೇತ್ರದವರು ಮಣಿಯಬಾರದು ಶಾಂತಿ ಸಹಬಾಳ್ವೆಯಿಂದ ನಾವು ಇರಬೇಕು ಎಂದು ಕರೆ ನೀಡಿದ್ದಾರೆ.

ಇದೇ ವೇಳೆ ಧ್ವನಿವರ್ಧಕ ಅಳವಡಿಕೆಯ ಬಗ್ಗೆ ಮಾತನಾಡಿದ ಅವರು, ನಿಯಮಿತ ಶಬ್ಧ ಬಳಕೆ ಮಾಡಲು ಡಿವೈಸ್ ಬಳಸಿಕೊಂಡು ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವಂತೆ ಮೌಲ್ವಿಗಳಿಗೆ ಸಲಹೆ ನೀಡಿದ್ದಾರೆ.