Belagavi News In Kannada | News Belgaum

ಆನ್‍ಲೈನ್ ಜ್ಯೋತಿಷಿ ನಂಬಿ 46 ಲಕ್ಷಕ್ಕೆ ಪಂಗನಾಮ ಹಾಕಿಸಿಕೊಂಡ ಉದ್ಯಮಿ

ತುಮಕೂರು: ಫೇಸ್‍ಬುಕ್‍ನಲ್ಲಿ ಜಾಹೀರಾತು ನೋಡಿ ಜೋತಿಷ್ಯಿಗಳನ್ನು ಹುಡುಕಿಕೊಂಡ ಉದ್ಯಮಿ ಬರೋಬ್ಬರಿ 46 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ಸೆನ್ ಠಾಣೆಯಲ್ಲಿ ದಾಖಲಾಗಿದೆ.

ನಗರದ ಸಪ್ತಗಿರಿ ಬಡಾವಣೆಯ ಉದ್ಯಮಿ ವಿಜಯ್ ಬಾಬು, ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಫೇಸ್ ಬುಕ್ ಜಾಹೀರಾತು ನೋಡಿ ಕರೆ ಮಾಡಿದ್ದು, ನಿಮ್ಮ ಕಷ್ಟಗಳಿಗೆ ಪರಿಹಾರ ಕೊಡೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ಪೀಕಿದ್ದಾರೆ.

ವೃತ್ತಿಯಲ್ಲಿ ಉದ್ಯಮಿಯಾಗಿರುವ ವಿಜಯ್ ಬಾಬು ಅವರು ಮನೆಯಲ್ಲಿನ ಹಲವು ಕೌಟುಂಬಿಕ ಸಮಸ್ಯೆಗಳಿಗೆ ಜ್ಯೋತಿಷ್ಯಿಗಳ ಬಳಿ ಹೋದ್ರೆ ಪರಿಹಾರ ಸಿಗುತ್ತೆ ಅಂದುಕೊಂಡಿದ್ದ ಅವರಿಗೆ ಆನ್‍ಲೈನ್ ಮೂಲಕ ಪರಿಚಯವಾದ ಜ್ಯೋತಿಷಿಗಳು ನಾಮ ಹಾಕಿದ್ದಾರೆ.

ಫೇಸ್‍ಬುಕ್ ಮೂಲಕ ಪರಿಚಯವಾದ ಜ್ಯೋತಿಷಿಗಳಾದ ಶಂಕರ್ ಶರ್ಮ ಹಾಗೂ ಮಾದವ ರಾವ್ ಗುರೂಜಿ ಎಂಬ ಹೆಸರಿನ ವ್ಯಕ್ತಿಗಳು ಪರಿಚಯವಾಗಿ, ನಿಮ್ಮ ಕಷ್ಟಗಳಿಗೆ ಪರಿಹಾರ ಮಾಡಿಕೊಡ್ತಿವಿ ಅಂತ ನಂಬಿಸಿ, ಪೂಜೆ, ಹೋಮ, ಹಾಗೂ ವಿವಿಧ ಕೈಂಕರ್ಯಗಳನ್ನು ಮಾಡ್ಬೇಕು ಇದಕ್ಕೆ ತುಂಬಾ ಹಣ ಖರ್ಚು ಆಗುತ್ತೆ ಅಂತ ಸುಳ್ಳು ಹೇಳಿ, ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ 46 ಲಕ್ಷ ರೂ. ಹಣ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ.

ಕೊನೆಗೆ ಯಾವುದೇ ಪೂಜೆ ಪುರಸ್ಕಾರ ಮಾಡದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಮೋಸಹೋದ ಉದ್ಯಮಿಯಿಂದ ತುಮಕೂರು ಸಿಇಎನ್ ಪೊಲೀಸ್ ಠಾಣೆಗೆ ದೂರ ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ./////