Belagavi News In Kannada | News Belgaum

ಸಚಿವ ಈಶ್ವರಪ್ಪ ಬಂಧನಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ ಆಗ್ರಹ

ಬೆಳಗಾವಿ: ಬೆಳಗಾವಿ ಗುತ್ತಿಗೆದಾರ ಆತ್ಮಹತ್ಯೆಗೆ ಕಾರಣವಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ವರ್‌ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಬಿಜೆಪಿ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯ ಸ್ಥಳಕ್ಕೆ ತೆರಳಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸಭೆಯೊಳಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌, ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಅವರು 40% ಕಮಿಷನ್ ಕೇಳಿರುವುದೇ ಕಾರಣ. ನನ್ನ ಆತ್ಮಹತ್ಯೆಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆದ ಕಾರಣ ಕೂಡಲೇ ಸಚಿವ ಈಶ್ವರಪ್ಪನವರ ರಾಜೀನಾಮೆ ಪಡೆಯಬೇಕೆಂದು ಹೆಬ್ಬಾಳರ್ ಆಗ್ರಹಿಸಿದರು.

ಬಿಜೆಪಿಯ ಹಾಗೆ ರಾಜಕಾರಣ ಯಾರಿಗೂ ಮಾಡಲು ಬರುವುದಿಲ್ಲ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಗುತ್ತಿಗೆದಾರರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗೆ ಪತ್ರ ಬರೆದಿದ್ದರು. ಮಾಧ್ಯಮ ಮಿತ್ರರಿಗೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದು ಸಚಿವ ಈಶ್ವರಪ್ಪನವರ ಮೇಲೆ ಗಂಭೀರ ಆರೋಪವಾಗಿದೆ. ಅವರನ್ನು ಕೂಡಲೇ ಬಂಧನ ಮಾಡಿ ತನಿಖೆ ಮಾಡಬೇಕು. ಸಂತೋಷ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು.

ಗುತ್ತಿಗೆದಾರ ಸಂತೋಷ ಪಾಟೀಲ ನನ್ನ ಕ್ಷೇತ್ರದಲ್ಲಿ ವರ್ಕ್ ಆರ್ಡರ್ ಇಲ್ಲದೆ ಕೆಲಸ ಮಾಡಿದ್ದಾನೆ. ಸಂಬಂಧಿಸಿದ ಗ್ರಾಪಂ, ಜಿಪಂ ಅಧ್ಯಕ್ಷರ ಬಂಧನ ಮಾಡಬೇಕು. ಎಲ್ಲಿದ್ದಾರೆ ಹಿಂಡಲಗಾ ಗ್ರಾಪಂ ಅಧ್ಯಕ್ಷರು ಎಂದು ಪ್ರಶ್ನಿಸಿದ ಅವರು, ಅವರನ್ನು ಬಂಧಿಸಿದರೆ ಎಲ್ಲ ಸತ್ಯ ಬಯಲಾಗುತ್ತದೆ ಎಂದರು.

ಸಚಿವ ಕೆ. ಎಸ್. ಈಶ್ವರಪ್ಪ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಸಂತೋಷ ಆರೋಪಿಸಿದ್ದರು. ಆದರೆ ಸಚಿವ ಈಶ್ವರಪ್ಪ ಅವರು ಸಂತೋಷ ಯಾರು ಎಂದು ಗೊತ್ತಿಲ್ಲ ಎನ್ನುತ್ತಾರೆ. ಈಶ್ವರಪ್ಪನರು ಕೇಸರಿ ಧ್ವಜ ಹಾರಿಸಿದ ಹಾಗೆ ಮಾತನಾಡುತ್ತಾರೆ. ಇವರಿಗೆ ಜನರ ಕಳಕಳಿ ಇಲ್ಲ. ಸಂತೋಷ ಹಿಂಡಲಗಾ ಗ್ರಾಮದಲ್ಲಿ ಕೆಲಸ ಮಾಡಿದ್ದು ನಿಜ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತದೆ ಎಂದರು.

ಸಂತೋಷ ಪಾಟೀಲ್‌ ಅಮಾಯಕ. ಸಚಿವರ ಭ್ರಷ್ಟಾಚಾರಕ್ಕೆ ಆತ ಒಪ್ಪಿಗೆ  ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರ ಬಗ್ಗೆ ಪತ್ರ ಬರೆದರೂ  ಯಾಕೆ  ಸ್ಪಂದಿಸಿಲ್ಲ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ರಾಜ್ಯದಲ್ಲಿ ಭ್ರಷ್ಟಾಷಾರ ತಾಂಡವಾಡುತ್ತಿದೆ. ಇಲಾಖೆ ವಾರು ಗುತ್ತಿಗೆದಾರರ ಬಗ್ಗೆ ಮಾಹಿತಿ  ಪಡೆದು ಬಿಜೆಪಿ ನಿಜ ಬಣ್ಣ ಬಯಲು ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾಲ್ಕು ಕೋಟಿ ರೂ. ಕಾಮಗಾರಿ ಯಾರು ಸುಮ್ಮನ್ನೆ ಮಾಡುವುದಿಲ್ಲ. ಅಧಿಕಾರಿಗಳು  ಹಾಗೂ ಸಚಿವರ ಒಪ್ಪಿಗೆ ಪಡೆದು ಅಭಿವೃದ್ಧಿ ಕಾರ್ಯಗಳಾಗುತ್ತವೆ. ಸರ್ಕಾರ ಇದರಲ್ಲೂ ಕಮೀಷನ್‌ ದಂಧೆ ಮಾಡುತ್ತಿದ್ದು, ಕರ್ನಾಟಕ ಅಭಿವೃದ್ಧಿ ಯಾವ ಕಡೆಗೆ ಸಾಗುತ್ತಿದೆ.  ಈ ಕೊಲೆಗಡುಕ ಈಶ್ವರಪ್ಪರ ವಿರುದ್ಧ ಕ್ರಮ ಜರುಗಿಸಬೇಕು ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್‌, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ನಗರದ ಕಾಂಗ್ರೆಸ್‌ ಭವನದಿಂದ  ಖಾಸಗಿ ಹೋಟೆಲ್‌ ವರೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಬಿಜೆಪಿ  ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. /////