Belagavi News In Kannada | News Belgaum

ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಪ್ರಗತಿ ಪರೀಶಿಲನಾ ಸಮಿತಿ ಸಭೆ

ಅಧಿಕಾರಿಗಳು ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು: ಈರಣ್ಣ ಕಡಾಡಿ

ಬೆಳಗಾವಿ, ಏ.12  : ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಯೋಜನೆಗಳ ಸಮರ್ಪಕ ಬಳಕೆ ಮಾಡಬೇಕು. ಅನುದಾನ ಬಿಡುಗಡೆಯಾದ ತಕ್ಷಣ ಗುರಿ ಸಾಧನೆಗಾಗಿ ಸೂಕ್ತವಾದ ಕ್ರಿಯಾ ಯೋಜನೆ ರೂಪಿಸಿ, ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಏ.12) ನಡೆದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ 4ನೇ ತ್ರೈಮಾಸಿಕ ಪ್ರಗತಿ ಪರೀಶಿಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಇಲಾಖೆಯ ಅಧಿಕಾರಿಗಳು ಅನುದಾನವನ್ನು ಸಮರ್ಪಕ ಬಳಕೆ ಮಾಡಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಈ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತೆ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಗುರಿ ಸಾಧಿಸಬೇಕು ಎಂದು ಈರಣ್ಣ ಕಡಾಡಿ ತಿಳಿಸಿದರು.
ಕೃಷಿ ಇಲಾಖೆಯಿಂದ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ, ಮಣ್ಣಿನ ಸತ್ವ ಹೆಚ್ಚುವಿಕೆ, ಕೃಷಿ ಯಾಂತ್ರೀಕರಣ, ಲಘು ನೀರಾವರಿ ಯೋಜನೆಗಳು ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಈ ಕುರಿತು ಅಧಿಕಾರಿಗಳು ಅಲ್ಪಸಂಖ್ಯಾತರ ರೈತರಿಗೆ ಮಾಹಿತಿ ದೊರೆಯುವಂತೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಹೇಳಿದರು.
ಜಿಲ್ಲೆಯ ಮೀನುಗಾರರಿಗೆ ಕಿಟ್ ವಿತರಣೆ ಮಾಡಲು ಸೂಚನೆ:
ಜಿಲ್ಲೆಯ 5 ಜಲಾಶಗಳಲ್ಲಿ ಹೆಚ್ಚು ಮೀನುಗಾರರಿದ್ದು, ಸುಮಾರು 500 ಜನರು ಮೀನುಗಾರಿಕೆಯಲ್ಲಿ ತೊಡಗಿಕೊಳ್ಳಲು ಪರವಾನಿಗೆ ಪಡೆದಿದ್ದಾರೆ. ಅದೇ ರೀತಿಯಲ್ಲಿ ಗ್ರಾಮೀಣ ಭಾಗದ ಜನರು ಕೆರೆ ಹಾಗೂ ಬಾವಿಗಳಲ್ಲಿ ಮೀನು ಸಾಕಾಣಿಕೆಯ ಮೂಲಕ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳಲು ಅವರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ರೇಷ್ಮೆ ಬೆಳೆ ರೈತರಿಗೆ ಸೂಕ್ತ ಸಲಹೆ ನೀಡಬೇಕು:
ಜಿಲ್ಲೆಯಲ್ಲಿ ರೇಷ್ಮೆ ಬೆಳೆ ರೈತರಿಗೆ ಸೂಕ್ತ ಸಲಹೆ ನೀಡಬೇಕು. ಕಳೆದ 2 ವರ್ಷಗಳಿಂದ ರೇಷ್ಮೆ ಬೆಳೆಗಾರರ ಸಂಖ್ಯೆ ಕಡಿಮೆಯಾಗುತ್ತಿದ್ದು, ಅಲ್ಪಸಂಖ್ಯಾತರ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ರೈತರಿಗೆ ರೇಷ್ಮೆ ಬೆಳೆಗಳ ಇಳುವರಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸೌಲಭ್ಯಗಳ ಮಾಹಿತಿ ನೀಡಬೇಕು.
ಜಿಲ್ಲೆಯಲ್ಲಿ ಒಟ್ಟು 2500 ಎಕರೆ ರೇಷ್ಮೆ ಬೆಳೆ ಬೆಳೆಯಲಾಗುತ್ತಿದೆ. ಗೋಕಾಕ್ ಹಾಗೂ ರಾಮನಗರದ ಮಾರುಕಟ್ಟೆಯಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆ ಮಾರಾಟ ಮಾಡಲಾಗುತಿದ್ದು, ವಿವಿಧ ಜಿಲ್ಲೆಯ ಮಾರುಕಟ್ಟೆಗಳ ಕುರಿತು ಮಾಹಿತಿ ನೀಡಬೇಕು ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ತಿಳಿಸಿದರು.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಅಬ್ದುಲ್ ರಶೀದ್ ಮಿರ್ಜನ್ನವರ ಮಾತನಾಡಿ, ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರ
ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ವಿದ್ಯಾರ್ಥಿವೇತನ, ಡಿ,ಎಡ್ ಹಾಗೂ ಬಿ,ಎಡ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಜೊತೆಗೆ ಎಂಪಿಎಲ್ ಹಾಗೂ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಶಶಿಕಾಂತ ಮುಣ್ಯಾಳ, ಪ್ರಧಾನ ಮಂತ್ರಿಗಳ 15 ಅಂಶಗಳ ಕಲ್ಯಾಣ ಕಾರ್ಯಕ್ರಮದ ಜಿಲ್ಲಾ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.