Belagavi News In Kannada | News Belgaum

ಬೆಳಗಾವಿ ಜಿಲ್ಲಾ ಪುರುಷ-ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನ್‌ಶಿಪ್‌ 2022 ಉದ್ಘಾಟನಾ ಸಮಾರಂಭ

ಶಾಸಕ ಸತೀಶ್‌ ಜಾರಕಿಹೊಳಿ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: 25% ರಾಜಕೀಯ ಮಾಡಿ, 75% ಸಮಾಜ ಸೇವೆ ಮಾಡುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಕಾರ್ಯ ಎಲ್ಲರಿಗೂ ಮಾದರಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ತಾಲ್ಲೂಕಿನ ಮುಚ್ಚಂಡಿ ಗ್ರಾಮದಲ್ಲಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲಾ ಪುರುಷ ಹಾಗೂ ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನ್‌ಶಿಪ್‌ 2022 ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.
ಶಾಸಕರಾದ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಮೊದಲಿನಿಂದಲೂ ಶಿಕ್ಷಣ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಅವರ ಮಗನಾದ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂತಸದ ವಿಚಾರ, ಕಾರಣ ರಾಹುಲ್ ಅವರು ಜಿಲ್ಲೆಯ ಕ್ರೀಡಾ ಕ್ಷೇತ್ರದ ರೂಪರೇಷೆಗಳನ್ನು ಬದಲಾವಣೆ ತರುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ, ಯುವ ನಾಯಕ ರಾಹುಲ್‌ ಜಾರಕಿಹೊಳಿ ಮಾತನಾಡಿ, ಗ್ರಾಮೀಣ ಭಾಗದ ಯುವಕರು, ಯುವತಿಯರು ರಾಜ್ಯ-ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಲು ನಾವು ಇಂದು ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುಂದೆಯೂ ಕೂಡ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈಗಾಗಲೇ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಂದೆ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯ ಹಮ್ಮಿಕೊಳ್ಳುವವರಿಗೆ ಫೌಂಡೇಶನ್ ವತಿಯಿಂದ ಉಚಿತ ಕಬಡ್ಡಿ ಮ್ಯಾಟ್‌ ವಿತರಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾಜಿ ಸಚಿವ ವೀರಕುಮಾರ ಪಾಟೀಲ್‌ ಮಾತನಾಡಿ,ಇಂದಿನ ಯುವಕರು ಸಮಯವನ್ನು ಸದ್ಬಳಕೆ ಮಾಡಿಕೊಂಡು ಕ್ರೀಡೆ ಹಾಗೂ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಬೇಕು. ಅಲ್ಲದೇ ಯುವಕರು ಇಂತಹ ಗ್ರಾಮೀಣ ಕ್ರೀಗಳತ್ತ ಮುಖ ಮಾಡಿ ಸದೃಡ ದೇಹ ಹೊಂದಿ ಉತ್ತಮ ಆರೋಗ್ಯ ಹೊಂದಬೇಕು ಎಂದರು.

ಕಾಂಗ್ರೆಸ್‌ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಕಬಡ್ಡಿ ಕ್ರೀಡೆ ಆಯೋಜನೆ ಮಾಡಿ ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವ ಯುವ ನಾಯಕ ರಾಹುಲ್‌ ಜಾರಕಿಹೊಳಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ವೇಳೆ ಮಾಜಿ ಶಾಸಕರಾದ ಶ್ಯಾಮ ಘಾಟಗೆ, ರಮೇಶ ಕುಡಚಿ, ಕಾಂಗ್ರೆಸ್‌ ಮುಖಂಡರಾದ ಮಹಾವೀರ ಮೋಹಿತೆ, ಮಹೇಶ ತಮ್ಮಣ್ಣವರ್‌, , ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ಉಪ ನಿರ್ದೇಶಕರಾದ ಬಸವರಾಜ ಮಿಲ್ಲಾನಟ್ಟಿ, ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಬೆಳಗಾವಿ ಸಂಸ್ಥಾಪಕ ಕಾರ್ಯದರ್ಶಿಗಳಾದ ಬಾಳೇಶ ಬರಗಾಲಿ, ಬಾಗಲಕೋಟೆ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಅಧ್ಯಕ್ಷರಾದ ನಂದಕುಮಾರ ಪಾಟೀಲ್‌ ಸೇರಿದಂತೆ ಇತರರು ಇದ್ದರು.