Belagavi News In Kannada | News Belgaum

ಡಾ.ಅಂಬೇಡ್ಕರ್ 131 ಜನ್ಮದಿನಾಚರಣೆ; ಗಣ್ಯರಿಂದ ಪ್ರತಿಮೆಗೆ ಮಾಲಾರ್ಪಣೆ-ಬುದ್ಧ-ಶಾಹು ಮಹಾರಾಜ್ ಪುತ್ಥಳಿ ಸ್ಥಾಪನೆಗೆ ಮನವಿ

ಬೆಳಗಾವಿ, ಏ.14: ಜಾತಿ-ಧರ್ಮದ ಭೇದವಿಲ್ಲದೆ ದೇಶದ ಎಲ್ಲ ವರ್ಗಗಳ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚಿಸಿದ ಕೀರ್ತಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ರಚಿಸಿದ ಸಂವಿಧಾನವು ನಮ್ಮ ದೇಶದ ಧರ್ಮಗ್ರಂಥವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಹೇಳಿದರು.
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ(ಏ.14) ಬೆಳಗಾವಿಯ ಡಾ.ಅಂಬೇಡ್ಕರ್ ಉದ್ಯಾನದಲ್ಲಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಜನರಿಗೆ ಸಂವಿಧಾನದ ಮೂಲಕ ನ್ಯಾಯವನ್ನು ಒದಗಿಸಿದ್ದಾರೆ.
ಸರಕಾರಿ ಸೌಲಭ್ಯ ಪಡೆದುಕೊಂಡು ಎಲ್ಲರೂ ಶಿಕ್ಷಣವನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯವಿದೆ. ಆದ್ದರಿಂದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.
ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಅವರ ಸಾಧನೆ ಅಥವಾ ಜ್ಞಾನದ ಬಗ್ಗೆ ವರ್ಣನೆ ಮಾಡುವುದೆಂದರೆ ಸಮುದ್ರದಲ್ಲಿ ಇರುವ ಹನಿ ನೀರಿನ ಬಗ್ಗೆ ಮಾತನಾಡಿದಂತೆ ಆಗುತ್ತದೆ. ಅವರ ಜ್ಞಾನ ಅಷ್ಟೊಂದು ಅಗಾಧವಾದುದು ಎಂದು ಸಚಿವ ಕಾರಜೋಳ ಬಣ್ಣಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಸಕ ಸತೀಶ್ ಜಾರಕಿಹೊಳಿ ಅವರು, ಪ್ರತಿವರ್ಷವೂ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಹೊಸ ಹೊಸ ವಿಚಾರಗಳ ಕುರಿತು ಚಿಂತನ-ಮಥನ ನಡೆಯಬೇಕು. ಹಿಂದುಳಿದ ವರ್ಗದ ಜನರು ಶಿಕ್ಷಣದ ಜತೆ ಜತೆಗೆ ಆರ್ಥಿಕವಾಗಿ ಸಬಲರಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಸೇರಬೇಕು ಕರೆ ನೀಡಿದರು.
ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತಗೊಳಿಸದೇ ಪ್ರತಿದಿನ ಮನೆಯಲ್ಲಿ ಅಂಬೇಡ್ಕರ್ ಚಿಂತನೆ ಮತ್ತು ವಿಚಾರಧಾರೆಗಳ ಮಂಥನ ಮಾಡಬೇಕು.
ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಅವರ ಆಶಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಶಾಹು ಮಹಾರಾಜ್-ಬುದ್ಧ ಪ್ರತಿಮೆ ಸ್ಥಾಪನೆಗೆ ಮನವಿ:
ಶಾಹು ಮಹಾರಾಜರು ಹಾಗೂ ಬುದ್ಧನ ಪ್ರತಿಮೆ ಸ್ಥಾಪನೆಗೆ ಹಿಂದಿನ ಸರಕಾರದಲ್ಲಿ ಅನುದಾನ ಮೀಸಲಿಡಲಾಗಿತ್ತು. ಈ ಪ್ರತಿಮೆಗಳ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸತೀಶ್ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ ಅವರು, ಬಾಬಾಸಾಹೇಬರು ಎರಡು‌ ಬಾರಿ ಬೆಳಗಾವಿಗೆ ಭೇಟಿ ನೀಡಿರುವುದು ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ಅಂಬೇಡ್ಕರ್ ವಾಸವಾಗಿದ್ದ ಕಟ್ಟಡವನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಿಕೊಂಡರು.
ಬಾಬಾಸಾಹೇಬರು ಯಾವಾಗಲೂ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಆದ್ದರಿಂದ ಎಲ್ಲರೂ ಶಿಕ್ಷಣವನ್ನು ಪಡೆದುಕೊಂಡು ಪ್ರಗತಿ ಸಾಧಿಸಬೇಕು ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಅವರು ರಚಿಸಿದ ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಬಿಡುಗಡೆ ಮಾಡಿದರು.
ಸಂಸದರಾದ ಮಂಗಳ ಅಂಗಡಿ, ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ದಲಿತ ಸಂಘಟನೆಯ ಮುಖಂಡರಾದ ಮಲ್ಲೇಶಿ ಚೌಗಲೆ, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ದಲಿತ ಸಂಘಟನೆಯ‌ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಸಚಿವ ಗೋವಿಂದ ಕಾರಜೋಳ ಹಾಗೂ ಗಣ್ಯರು ಬುದ್ಧವಿಹಾರಕ್ಕೆ ಭೇಟಿ ನೀಡಿದರು. ಅಲ್ಲಿನ ಅಂಬೇಡ್ಕರ್ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು. ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಬಳಿಕ ನಗರದ ಧರ್ಮವೀರ‌ಸಂಭಾಜಿ ವೃತ್ತದಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನಪರಿಷತ್ತಿನ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಕಡೆಯಿಂದ ಸಾವಿರಾರು ಜನರು ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.