Belagavi News In Kannada | News Belgaum

ಸರ್ವರು ಶಿಕ್ಷಣವಂತರಾಗಬೇಕು ಎಂಬುದು ಡಾ.ಅಂಬೇಡ್ಕರರ ಮಹಾದಾಸೆ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 131 ಜನ್ಮದಿನಾಚರಣೆ

ಬೆಳಗಾವಿ,ಏ.14  : ಸಮಾಜದ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು, ಶಿಕ್ಷಣದಿಂದಲೇ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಬರುತ್ತದೆ. ಆದ್ದರಿಂದ ಸರ್ವರು ಶಿಕ್ಷಣವಂತರಾಗಬೇಕು ಎನ್ನುವುದು ಡಾ. ಬಾಬಾಸಾಹೇಬ ಅಂಬೇಡ್ಕರರ ಮಹಾದಾಸೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ(ಏ.14) ಬೆಳಗಾವಿಯ ಡಾ.ಅಂಬೇಡ್ಕರ್ ಉದ್ಯಾನದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಜಯಂತಿಯನ್ನು ಹೇಗೆ ಮಾಡಬೇಕು ಎಂದು ಅಂದುಕೊಂಡಿದ್ದೇವೋ ಅದಕ್ಕಿಂತ ಉತ್ತಮ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ್ದು ಸಂತೋಷ ಸಂಗತಿಯಾಗಿದೆ. ಬೆಳಗಾವಿಯ ಜನರು ಕರೋನಾ ಜಂಜಾಟದಲ್ಲಿ ಮುಳಗಿದ್ದರು, ಅಂಬೇಡ್ಕರ್ ಜಯಂತಿಯಿಂದ ಬೆಳಗಾವಿಯಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ  ಎಂದರು.
ಶಿಕ್ಷಣ, ಕ್ರೀಡೆ, ಯೋಗದಲ್ಲಿ ಉತ್ತಮ ಸಾಧನೆ ಮಾಡಿದ ಪರಿಶಿಷ್ಠ ಜಾತಿಯ  ಪ್ರತಿಭಾನ್ವಿತ  24 ಪೌರಕಾರ್ಮಿಕ ಮಕ್ಕಳಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಮಾಡಿದ್ದು, ಮುಂದೆ ಸಮುದಾಯದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾಯಿಯನ್ನು ಹೊಂದಬೇಕು ಎಂದರು
ಅಂಬೇಡ್ಕರ ಅವರಿಗೆ ಸಂವಿಧಾನ ರಚನೆ ಮಾಡುವ ಕಾರ್ಯ ನಿರ್ವಹಿಸಿದ್ದು ಯಾವುದೇ ರಾಜಕೀಯ ದೃಷ್ಠಿಯಿಂದಲ್ಲಿ ಆಗಿನ ಸರ್ಕಾರದಲ್ಲಿ ಇವರಿಗಿಂತ ಹೆಚ್ಚು ಶಿಕ್ಷಣವಂತರು, ಪಾಂಡಿತ್ಯ ಹೊಂದಿದರು, ಜ್ಞಾನಿಗಳು, ಪ್ರತಿಭಾನ್ವಿತರು ಯಾರು ಇದ್ದಿರಲ್ಲಿಲ್ಲ, ಆದಕಾರಣ ಅವರಿಗೆ ಸಂವಿಧಾನ ರಚನೆ ಕಾರ್ಯವನ್ನು ವಹಿಸಿದರು. ಇದನ್ನು ಹೊಂದಲು ಅಂಬೇಡ್ಕರ್ ಅವರ ಮೂಲ ಅಸ್ತ್ರ ಶಿಕ್ಷಣವಾಗಿತ್ತು ಎಂದರು.
ಡಾ.ಅಂಬೇಡ್ಕರ ಅವರು ಬರೋಡದ ಮಹಾರಾಜರಿಂದ ಹಾಗೂ ಶಾಹು ಮಹಾರಾಜರಿಂದ ಶಿಷ್ಯವೇತನ ಪಡೆದು ಉನ್ನತ ಶಿಕ್ಷಣವನ್ನು ಪಡೆಕೊಂದುಕೊಂಡು, ಸಮಾಜದ ನಾಯಕರಾಗಿ ಎಲ್ಲ ಸಮುದಾಯದವರಿಗೆ ಸಮಾಜ ನ್ಯಾಯ ನೀಡುವ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಎಂದರೆ ಅಂಬೇಡ್ಕರು ಅವರು ಎಂದರು.
ಎಲ್ಲ ಮಕ್ಕಳಿಗೂ ಸರ್ಕಾರವು ಉತ್ತಮ ರೀತಿ ವಿದ್ಯಾಭ್ಯಾಸ ಹೊಂದುವ ವ್ಯವಸ್ಥೆಯನ್ನು ಮಾಡಿದೆ. ಹಾಸ್ಟೆಲ್, ಶಿಷ್ಯವೇತನ ಒಳ್ಳೆಯ ವಾತಾವರಣವನ್ನು ಸೃಷ್ಠಿಸಿದೆ ಇದರ ಸದುಪಯೋಗ ಸಮುದಾಯದ ಪ್ರತಿಯೊಬ್ಬರು ಪಡೆದುಕೊಂಡು, ಅಂಬೇಡ್ಕರ್ ಅವರು ಹೇಳಿದ ಸರ್ವರು ಶಿಕ್ಷಣವಂತರಾಗಿ ಉನ್ನತ ಸ್ಥಾನವನ್ನು ಪಡೆಯಬೇಕು ಎಂದು ಮಕ್ಕಳಿಗೆ ಹಿತನುಡಿ ಹೇಳಿದರು.
ಸಮಾನತೆ ಹೊಂದಲು ಶಿಕ್ಷಣವೇ ಅಸ್ತ್ರವಾಗಿಸಿಕೊಂಡು ಉನ್ನತ ಸ್ಥಾನ ಒಡೆದರೆ ಸಮಾಜ ಸಮುದಾಯವನ್ನು ಪದ್ದತಿಯನ್ನು ಮರೆಯುತ್ತದೆ, ಆದ್ದರಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಉತ್ತಮ ಪಲಿತಾಂಶ ಹೊಂದಬೇಕು, ಇದಕ್ಕೆ ಸಮಾಜ ಕಲ್ಯಾಣ ಇಲಾಖೆಯವರು ಹಾಗೂ ಎಲ್ಲ ಇಲಾಖೆಯವರು ಸಹಾಯ ನೀಡಬೇಕು ಎಂದರು.
ಅಂಬೇಡ್ಕರ, ಬುದ್ಧ, ಮಹಾವೀರ, ಬಸವಣ್ಣವರು ಇಂತ ಮಹಣೀಯರಿಂದ ನಮ್ಮ ಸಂಸ್ಕೃತಿ ಬೆಳೆದು ಬಂದಿದೆ. ಉಕ್ರೇನ್ ನಲ್ಲಿ ಸೀಲುಕಿನ ಭಾರತೀಯರನ್ನು ಮಾತ್ರವಲ್ಲದೇ ಪಾಕಿಸ್ತಾನ ಸೇರಿ ಹಲವು ರಾಷ್ಟ್ರದ ಜನರನ್ನು ಭಾರತ ಕರೆತದ್ದದ್ದು ಇಂತ ಮಹಣೀಯರು ನಮಗೆ ನೀಡಿದ ಸಂಸ್ಕೃತಿಯಿಂದಲೇ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು  ಹೇಳಿದರು.
ಏಪ್ರಿಲ್ ತಿಂಗಳು  ಮಹಾತ್ಮರ ಜಯಂತಿಗಳ ತಿಂಗಳು, ಈ ತಿಂಗಳಿನಲ್ಲಿ ಅಂಬೇಡ್ಕರ, ಮಹಾವೀರ, ದು ಜಗಜೀವನರಾವ್ ರಂತರ ಮಹಣೀಯ ಜಯಂತಿಗಳು ಇದೆ. ಜಗತ್ತಿನಾದ್ಯಂತ ಜಯಂತಿ ಆಚರಣೆ ಆಗುತ್ತದೆ ಎಂದರೇ ಅದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿಯಾಗಿದೆ ಎಂದು ಉಪನ್ಯಾಸಕರಾಗಿ ಆಗಮಿಸಿದ ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಕೆ.ಡಿ ಮಂತ್ರೇಶಿ ಅವರ ಹೇಳಿದರು.
ಜಗತ್ತಿನಲ್ಲಿ ಅತಿ ಹೆಚ್ಚು ಸಮಾಜ ಕಾರ್ಯ ಮಾಡಿದ ವ್ಯಕ್ತಿ ಅಂಬೇಡ್ಕರ್. ಲಂಡನ್ ಗ್ರಂಥಾಲಯದಲ್ಲಿ 5 ಜನ ಮಹಾನ ವ್ಯಕ್ತಿಗಳ ಹೆಸರನ್ನು ಗೋಡೆಯ ಮೇಲೆ ಬರೆಯಲಾಗಿದೆ, ಅದರಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಹೆಸರನ್ನು ಮೊದಲು ಬರೆಯಲಾಗಿದೆ, ಇದು ಅವರ ಸಾಧನೆಯ ಪ್ರತಿಕವಾಗಿದೆ ಎಂದರು.
ಅಂಬೇಡ್ಕರ್ ಜಯಂತಿ ಎಂದರೆ ಪುಸ್ತಕಗಳ ಜಯಂತಿ, ಇವರ ಜಯಂತಿ ದಿನ ಅತೀ ಹೆಚ್ಚು ಪುಸ್ತಕಗಳು ಖರೀದಿಯಾಗುತ್ತವೆ, ಏಪ್ರಿಲ್ 14 ನ್ನು ಪುಸ್ತಕಗಳ ಹಬ್ಬ ಎಂದರು.
ದೇಶದ ರಾಜಕೀಯವನ್ನು ಗುಲಾಮಗಿರಿಯಿಂದ ಮುಕ್ತ ಮಾಡುವ  ಉದ್ದೇಶದಿಂದ ನಾನು ಉನ್ನತ ಶಿಕ್ಷಣ ಪಡೆಯುತ್ತೇನೆ ಎಂದು ಅಂಬೇಡ್ಕರ ಅವರು ಚಿಕ್ಕವರಿದ್ದಾಗ ಶಪಥ ಮಾಡಿದ್ದರು, ಆ ಗುರಿಸಾಧನೆಗೆ ಶ್ರಮಿಸಿ ಅದಕ್ಕೆ ನಿದರ್ಶನ ಎಂಬಂತೆ ಸಂವಿಧಾನವನ್ನು ರಚಿಸಿದರು. ನೀವು ಅವರಂತೆ ಗುರಿಯನ್ನು ಇಟ್ಟುಕೊಂಡುಕೊಂಡ, ಆ ಗುರಿಗಾಗಿ ಸತತ ಪರಿಶ್ರಮ ಪಡೆಬೇಕು ಎಂದು ಮಕ್ಕಳಿಗೆ ಸೂಚನೆ ನೀಡಿದರು.
ಬಾಬಾಸಾಹೇಬರು ಕಲಿಯಿರಿ, ಕಲಿಸಿರಿ, ಸಂಘಟಿತರಾಗಿ ಎಂದು ಹೇಳಿದ್ದಾರೆ. ನಮ್ಮ ನಮ್ಮಲ್ಲಿ ಹೊರಾಟ ಮಾಡದೇ ಅವ್ಯವಸ್ಥೆ ವಿರುದ್ದ ಹೋರಾಟ ಮಾಡಿ ಎಂದು ಸರ್ವರಿಗೂ ಸಾರಿ ಹೇಳಿದ್ದಾರೆ. ಮಹಾತ್ಮರನ್ನು ಎಲ್ಲರೂ ತಲೆಯ ಮೇಲೆ ಹೊತ್ತುಕೊಳ್ಳದೆ ತಲೆಯ ಒಳಗೆ ತೆಗೆದುಕೊಂಡು ಅವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿ ಎಂದು ಮುಂಬೈ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಕೆ.ಡಿ ಮಂತ್ರೇಶಿ ಅವರು ಕರೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಶಿಕ್ಷಣ, ಕ್ರೀಡೆ, ಯೋಗದಲ್ಲಿ ಉತ್ತಮ ಸಾಧನೆ ಮಾಡಿದ  ಪರಿಶಿಷ್ಠ ಜಾತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನ ವಿರತಣೆ ಮಾಡಲಾಯಿತು.
ಅಜೀತ ಮಾದರ ರಚಿಸಿದ ” ಡಾ.ಬಿ.ಆರ್.ಅಂಬೇಡ್ಕರ್ ಅವರ ಅವಿಸ್ಮರಣೀಯ ಸಂಗತಿಗಳು ಮತ್ತು ನುಡಿಮುತ್ತುಗಳು” ಎಂಬ ಪುಸ್ತಕ ಬಿಡುಗಡೆ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಕುರಿಹುಲಿ ಅವರು ಕಾರ್ಯಕ್ರಮದ ವಂದನಾರ್ಪನೆ ಮಾಡಿದರು. ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕರಾದ ಎಂ.ಬಿ.ಹೊಸಮನಿ ಅವರು ನಿರೂಪನೆ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಗಾಳಿ, ಡಿ.ಸಿ.ಪಿ ರವೀಂದ್ರ ಗಡಾದ,   ಮಾನವ ಹಕ್ಕುಗಳ ಆಯೋಗದ ಎಸ್.ಪಿ. ಭೂಮರೆಡ್ಡಿ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಹಾಗೂ ಮಹಾನಗರ ಪಾಲಿಕೆ‌, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.