Belagavi News In Kannada | News Belgaum

ಮಂತ್ರಿ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ

ಶಿವಮೊಗ್ಗ: ವಿಪಕ್ಷಗಳ ತೀವ್ರ ಒತ್ತಾಯ, ಬಿಜೆಪಿ ಹೈಕಮಾಂಡ್‌ ಬೇಸರ ಹಾಗೂ ಸಿಎಂ ಸಲಹೆ ಮೇರೆಗೆ ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಯಾರೆಂದು ನನಗೆ ಗೊತ್ತೇ ಇಲ್ಲ. ಸುಖಾಸುಮ್ಮನೆ ನನ್ನ ಮೇಲೆ ಆರೋಪ ಮಾಡಲಾಗಿದೆ. ಸಂತೋಷ್‌ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನಿನ್ನೆ ಈಶ್ವರಪ್ಪ ಖಡಕ್‌ ಆಗಿ ಹೇಳಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಇಂದು ಸಂಜೆ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ಶುಕ್ರವಾರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ, ನಾಳೆಯೇ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿತ್ತು. ಗುರುವಾರ ಬೆಳಗ್ಗೆ ಸಿಎಂ ನಿವಾಸಕ್ಕೆ ಕಾಂಗ್ರೆಸ್‌ ನಾಯಕರು ಮುತ್ತಿಗೆ ಹಾಕುವ ರ‍್ಯಾಲಿ ಕೂಡ ನಡೆಸಿದ್ದರು.

ಇದೇ ಏ.16, 17 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎರಡು ದಿನ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಈಶ್ವರಪ್ಪ ಪ್ರಕರಣದಿಂದ ತಮ್ಮ ಭೇಟಿಯ ಸಂದರ್ಭದಲ್ಲಿ ಮುಜುಗರಕ್ಕೆ ಈಡಾಗಬಹುದು ಎಂಬ ಕಾರಣದಿಂದ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಈಶ್ವರಪ್ಪ ಅವರಿಗೆ ಫೋನ್‌ ಕರೆ ಮಾಡಿ ತಿಳಿಸಿದ್ದರು.

ನನ್ನ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ನೇರ ಕಾರಣ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಡೆತ್‌ನೋಟ್‌ ಬರೆದಿಟ್ಟು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಬೆಳಿಗ್ಗೆ ಸಂತೋಷ್‌ ಅಂತ್ಯಕ್ರಿಯೆ ನೆರವೇರಿತು./////