Belagavi News In Kannada | News Belgaum

ಸಂತೋಷ ಪ್ರಕರಣಕ್ಕೆ ಸಿಲುಕಿ ಬಾಡಿದ ಕಮಲ

ಬೆಳಗಾವಿ: ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರಲು ಮತ್ತು ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಮೂರು ತಂಡದಲ್ಲಿ ಬಿಜೆಪಿ ರಾಜ್ಯ ಪ್ರವಾಸ ಆರಂಭಿಸಿರುವ ಸಂದರ್ಭದಲ್ಲೇ ಭಾರೀ ಮುಜುಗರಕ್ಕೆ ಸಿಲುಕಿದೆ.

 

ಹಿಜಾಬ್ ನಿಂದ  ಹಿಡಿದು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಮತೀಯ ಸಂಘರ್ಷವನ್ನು ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ವಿರೋಧ ಪಕ್ಷಗಳ ಕೂಗಿನ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ವಿಚಾರ, ಕಾಂಗ್ರೆಸ್ ಗೆ ಭಾರೀ ಅಸ್ತ್ರವೊಂದು ಸಿಕ್ಕಂತಾಗಿದೆ.

ಹೆಚ್ಚಿದ ಬೆಳಗಾವಿ ಬೆಂಕಿ: ಒಂದು ಕಡೆ  ಬಿಜೆಪಿಯು ಮೂರು ತಂಡವಾಗಿ ರಾಜ್ಯ ಪ್ರವಾಸವನ್ನು ಮಂಗಳವಾರ ಏ.12ರಂದು ಆರಂಭಿಸಿತ್ತು. ಮಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಬಿಜೆಪಿ ಮುಖಂಡರು ಸಭೆ ನಡೆಸಿದ್ದರು. ಈ ಹೊತ್ತಿನಲ್ಲಿ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಬಿಜೆಪಿಯನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಡೆತ್ ನೋಟ್ನಲ್ಲಿ ಸಚಿವ ಈಶ್ವರಪ್ಪನವರ ಹೆಸರು ಉಲ್ಲೇಖವಾಗಿದ್ದರಿಂದ ವಿರೋಧ ಪಕ್ಷದವರು ಅವರ ತಲೆದಂಡಕ್ಕೆ ಪಟ್ಟು ಹಿಡಿದಿದ್ದಾರೆ.

ಹೋರಾಟ ತೀವ್ರಗೊಳ್ಳುವ ಸಾಧ್ಯತೆ:
ಧಾರ್ಮಿಕ ವಿಚಾರದಲ್ಲಿ ಬಿಜೆಪಿ ಮುಖಂಡರು ಮತ್ತು ಸಂಘ ಪರಿವಾರದವರು ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಲೇ ಬರುತ್ತಿದೆ. ಈಗ ಈಶ್ವರಪ್ಪನವರ ವಿಚಾರ ಕಾಂಗ್ರೆಸ್ಗೆ ಸಿಕ್ಕಿದೆ. ಈಶ್ವರಪ್ಪನವರ ರಾಜೀನಾಮೆ ಪಡೆದುಕೊಂಡು ಅವರನ್ನು ಬಂಧಿಸಬೇಕೆಂದು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ತೆರಳಿ ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಬಿಜೆಪಿಗೆ ಸೆಡ್ಡುಹೊಡೆದ ಕಾಂಗ್ರೆಸ್‌: ಈ ಹಿಂದೆ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಕೊಡಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಈಗ ಕಾಂಗ್ರೆಸ್ ಅದನ್ನು ತಿರುವು ಮುರುವು ಮಾಡಲು ಕಾರ್ಯತಂತ್ರವನ್ನು ರೂಪಿಸುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ  ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಶತಾಯ-ಗತಾಯು ಹೋರಾಟಕ್ಕೆ ಇಳಿಯುವ ಸಾಧ್ಯತೆ ಇರುವುದರಿಂದ ಬಿಜೆಪಿಯ ಪಕ್ಷ ಬಲಬರ್ಧನೆ ಪ್ರವಾಸಕ್ಕೆ ಸಡ್ಡು ಹೊಡೆಯುವುದು ನಿಶ್ಚಿತ.

ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ ಸಂತೋಷ ಆತ್ಮಹತ್ಯೆ ಪ್ರಕರಣ: ರಾಷ್ಟ್ರಧ್ವಜದ ವಿಚಾರದಲ್ಲಿ ಬಿಜೆಪಿ ನಾಯಕರು ಈಶ್ವರಪ್ಪನವರ ಬೆನ್ನಿಗೆ ನಿಂತಿದ್ದರು. ಆದರೆ, ಸಂತೋಷ್ ಸಾವಿನ ವಿಚಾರದ ಡೆತ್ ನೋಟ್ ನಲ್ಲಿ ನೇರ ಈಶ್ವರಪ್ಪನವರ ಹೆಸರು ಉಲ್ಲೇಖವಾಗಿರುದರಿಂದ ಬಿಜೆಪಿ ನಾಯಕರು ಅವರ ಸಮರ್ಥನೆಗೆ ನಿಲ್ಲಲಿದ್ದಾರಾ ಎನ್ನುವುದೀಗ ಪ್ರಶ್ನೆ. ಒಟ್ಟಿನಲ್ಲಿ, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮತ್ತು ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ರಾಜ್ಯ ಪ್ರವಾಸ ಹೊರಟಿರುವ ಬಿಜೆಪಿ ನಾಯಕರಿಗೆ ಸಂತೋಷ್ ಆತ್ಮಹತ್ಯೆ ವಿಚಾರ ತೀವ್ರ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ./////