Belagavi News In Kannada | News Belgaum

ವಿಶ್ವಕ್ಕೆ  ಶಾಂತಿ ಮಂತ್ರ ಬೋಧಿಸಿದ ಮಹಾವೀರರು

ಅಥಣಿಯಲ್ಲಿ ಸಂಭ್ರಮದ ಶೋಭಾಯಾತ್ರೆಗೆ ಚಾಲನೆ

ಅಥಣಿ: ಭಗವಾನ್‌ ಮಹಾವೀರರು ವಿಶ್ವದೆಲ್ಲೆಡೆ ಶಾಂತಿ ಸಂದೇಶವನ್ನು ಸಾರಿದವರು. ಅವರ ಜನ್ಮ ಕಲ್ಯಾಣ ದಿನವನ್ನು ಇಂದು  ದೇಶ-ವಿದೇಶಗಳಲ್ಲಿ  ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಅವರು ನೀಡಿದ ಸಂದೇಶಗಳು ನಮ್ಮೆಲ್ಲರ ಬದುಕಿಗೆ ಬೆಳಕಾಗಿವೆ ಎಂದು ಜೈನ ಸಮುದಾಯದ ಮುಖಂಡ  ಹಾಗೂ ನ್ಯಾಯವಾದಿ ಕಲ್ಲಪ್ಪ ವಣಜೋಳ  ಹೇಳಿದರು.
 ಅವರು ಗುರುವಾರ ಪಟ್ಟಣದ ಬುಧವಾರ ಪೇಟೆಯಲ್ಲಿರುವ ಜೈನ ಬಸದಿಯಲ್ಲಿ ಭಗವಾನ್ ಮಹಾವೀರರ  ಜನ್ಮಕಲ್ಯಾಣ  ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
  ಜಗತ್ತಿನ ಎಲ್ಲೆಡೆ  ಅಶಾಂತಿ ಕಾರ್ಮೋಡ  ಹೆಚ್ಚಾದಾಗ   ಆಗಿನ ಕಾಲಘಟ್ಟದಲ್ಲಿ ಭಗವಾನ್ ಮಹಾವೀರರು  ನೀಡಿದ ಶಾಂತಿ  ಸಂದೇಶ ಹೆಚ್ಚು ಪ್ರಸ್ತುತತೆಯನ್ನು ಪಡೆದಿತ್ತು. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ವಿಶ್ವದ ಹಲವಾರು ದೇಶಗಳಲ್ಲಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಇವರ ಬೋಧನೆಗಳಲ್ಲಿ  ಸತ್ಯ, ಅಹಿಂಸೆ, ಆಚೌರ್ಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಮಹಾವ್ರತಗಳಾಗಿವೆ. ಇವರು ಅಹಿಂಸೆಯ ಪ್ರತಿಪಾದಕರು. ಮಹಾವೀರರ ಜಯಂತಿಯನ್ನು ಆಚರಿಸುವ ಮೂಲ ಉದ್ದೇಶ ಪ್ರತಿಯೊಬ್ಬರೂ ಕೂಡ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ಸರ್ವರಿಗೂ ತಿಳಿಸಿ ಕೊಡುವುದಾಗಿದೆ.
ವಿಶ್ವದ ಪ್ರತಿಯೊಬ್ಬರು ಎಲ್ಲ ಜೀವಿಗಳನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಹಾಗೂ ಸೂಕ್ಷ್ಮ ಜೀವಿಗಳಿಂದ ಹಿಡಿದು ದೊಡ್ಡ ಬಹುಕೋಶ ಜೀವಿಗಳವರೆಗೂ ಕೂಡ ಈ ಮಹಾವ್ರತಗಳನ್ನು  ಆಚರಿಸಿಕೊಂಡು ಮುನ್ನಡೆಯಬೇಕು ಎಂಬುದು ಇವರ ಸಂದೇಶದ ಮೂಲ ತಾತ್ಪರ್ಯವಾಗಿದೆ ಎಂದು ಹೇಳಿದರು.
ಭಾರತೀಯ  ಜೈನ ಸಂಘಟನೆಯ ತಾಲೂಕ ಅಧ್ಯಕ್ಷ  ಡಿ. ಡಿ ಮೇಕನಮರಡಿ ಮಾತನಾಡಿ ಅಶಾಂತಿ ತಾಂಡವಾಡುತ್ತಿರುವ ಇಂದಿನ ದಿನಗಳಲ್ಲಿ  ಮಹಾವೀರರ ಸಂದೇಶಗಳು ಇಡೀ ವಿಶ್ವಕ್ಕೆ ಅತೀ ಅಗತ್ಯವಾಗಿಬೇಕಾಗಿದೆ.
ಮಹಾವೀರರು ವಯಸ್ಸಿಗೆ ಬಂದಾಗ ರಾಜ್ಯವನ್ನು ಆಳುವ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ತಮ್ಮ 30 ನೇ ವಯಸ್ಸಿನಲ್ಲಿ ಸರ್ವ ರಾಜಭೋಗವನ್ನು ತ್ಯಜಿಸಿ ಆತ್ಮಕಲ್ಯಾಣದ ಹಾದಿ ತುಳಿದರು.
ಈ ಮೂಲಕ ಮಹಾವೀರರು ಭೋಗ ಜೀವನಕ್ಕಿಂತ ತ್ಯಾಗ ಜೀವನ ಶ್ರೇಷ್ಠ ಎಂಬುದನ್ನು ಸಾರಿ ಹೇಳಿದರು. ಅವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ  ಸಾರ್ಥಕ ಜೀವನ ನಡೆಸಬೇಕೆಂದು ಕರೆ ನೀಡಿದರು.
 ಈ ವೇಳೆ ತಹಸಿಲ್ದಾರ ದುಂಡಪ್ಪ ಕೋಮಾರ, ಸಮಾಜ ಕಲ್ಯಾಣ ಅಧಿಕಾರಿ ಪ್ರವೀಣ ಪಾಟೀಲ, ತಾಪಂ. ಅಧಿಕಾರಿ ಶೇಖರ ಕರಬಸಪ್ಪಗೋಳ,
ಡಾ. ಪದ್ಮಜೀತ್ ನಾಡಗೌಡ, ಅರುಣ ಯಲಗುದ್ರಿ, ಅಮರ ದುರ್ಗಣ್ಣವರ, ರಮೇಶ ಬಾಳಿಕಾಯಿ, ವಿದ್ಯಾದರ ಡುಮ್ಮನವರ, ವಾಣಿಶ್ರೀ ದಾನಗೌಡರ, ಸತೀಶ ಗೊಂಗಡಿ, ಪ್ರಫುಲ ಪಡನಾಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಭ್ರಮದಿಂದ ಶೋಭಾಯಾತ್ರೆ  ಜರುಗಿ ತರಕಾರಿ  ಮಾರುಕಟ್ಟೆಯ ಜೈನ್ ಬಸದಿಯಲ್ಲಿ ಸಮಾರೋಪಗೊಂಡಿತು.