Belagavi News In Kannada | News Belgaum

ಶೋಷಿತ ಸಮುದಾಯ ಶಿಕ್ಷಣ ಪಡೆದು ಪ್ರತಿಯೊಂದು ಹಂತದಲ್ಲಿ  ಮುಖ್ಯವಾಹಿನಿಗೆ ಬರಬೇಕು ಎಂಬುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ  ನಿಲುವಾಗಿತ್ತು

 ಅಥಣಿ : ಶೋಷಿತ ಸಮುದಾಯ ಶಿಕ್ಷಣ ಪಡೆದು ಪ್ರತಿಯೊಂದು ಹಂತದಲ್ಲಿ  ಮುಖ್ಯವಾಹಿನಿಗೆ ಬರಬೇಕು ಎಂಬುದು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ  ನಿಲುವಾಗಿತ್ತು. ಅಂಬೇಡ್ಕರ ಅವರು  ತಮ್ಮ ಜೀವನಾನುಭವ, ಅಧ್ಯಯನ ಮತ್ತು ಜ್ಞಾನವನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ.
ಹಲವು ಜಾತಿ ಹಲವು ಧರ್ಮಗಳು ಇರುವ ನಮ್ಮ ದೇಶಕ್ಕೆ  ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಸಂದೇಶದಂತೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಆದ್ದರಿಂದಲೇ  ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಿದ್ದು, ದೇಶದ  ಪ್ರಗತಿಯಲ್ಲಿ ಅಂಬೇಡ್ಕರ್ ಕೊಡುಗೆ ದೊಡ್ಡದು ಎಂದು ಶಾಸಕ ಹಾಗೂ ರಾಜ್ಯ ಕೊಳಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್ ಕುಮಟಳ್ಳಿ ಹೇಳಿದರು.
        ಅವರು  ಗುರುವಾರ  ಪಟ್ಟಣದ ಅಂಬೇಡ್ಕರ ವತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಹೂಮಾಲೆ ಅರ್ಪಿಸಿ ನಂತರ  ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಮತ್ತು ತಾಲೂಕ ಪಂಚಾಯತ ಇವರ ಆಶ್ರಯದಲ್ಲಿ ನಡೆದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಒಂದು 131ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೋಷಿತ ಸಮುದಾಯ ಮತ್ತು ಮಹಿಳೆಯರು ಶಿಕ್ಷಣ ಪಡೆಯುವ ಮೂಲಕ  ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲತೆ ಹೊಂದಬೇಕು  ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅವರ ಆಶಯದಂತೆ ಸರ್ಕಾರಗಳು ಕೆಲಸ ಮಾಡಿದ್ದರೆ ಹಿನ್ನೆಲೆಯಲ್ಲಿ  ಇಂದು ಶೋಷಿತ ಸಮುದಾಯದ  ಜನರು ಮತ್ತು ಮಹಿಳೆಯರು ಪ್ರತಿಯೊಂದು ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
 ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು.  ಶಿಕ್ಷಣದಿಂದಲೇ ದೇಶದ ಪ್ರಗತಿ ಸಾಧ್ಯ.
ನಾವು ಶಿಕ್ಷಣ ಪಡೆದು ಎಷ್ಟೇ ಉನ್ನತ ಹುದ್ದೆಯಲ್ಲಿ ಇದ್ದರೂ ನಮ್ಮ ಭಾರತೀಯ ಸಂಸ್ಕೃತಿಯನ್ನು, ಪರಂಪರೆಯನ್ನು ಮರೆಯಬಾರದು. ಇಂದಿನ ಮಕ್ಕಳಿಗೆ  ಉತ್ತಮ ಶಿಕ್ಷಣದ ಜೊತೆಗೆ ಉತ್ತಮ  ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದು ಅಗತ್ಯವಿದೆ. ಎಂದು ಹೇಳಿ ಉತ್ತಮ ಶಿಕ್ಷಣ ಪಡೆದು  ನ್ಯಾಯಾಧೀಶರಾಗಿ, ಪಿಎಸ್ಐ ಹುದ್ದೆಗೆ  ಆಯ್ಕೆಯಾದ ಸಾಧಕರಿಗೆ  ಸನ್ಮಾನಿಸಿ ಶುಭಹಾರೈಸಿದರು.
 ತಹಸಿಲ್ದಾರ ದುಂಡಪ್ಪಕೋಮಾರ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ಅವರು ಕಷ್ಟದ ದಿನಗಳಲ್ಲಿ ಅನೇಕ ಅವಮಾನಗಳನ್ನು ಎದುರಿಸಿ ಶಿಕ್ಷಣ ಪಡೆದರು. ದೇಶದಲ್ಲಿನ ಅಸ್ಪಶತೆ, ಮೌಡ್ಯತೆ  ತೊಲಗಬೇಕಾದರೆ  ಭಾರತೀಯರು ಮೊದಲು  ಶಿಕ್ಷಣ ಪಡೆದು ಸಾಕ್ಷರರಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಮೂಲಕ  ಅನೇಕ ಸವಾಲುಗಳನ್ನು ಎದುರಿಸಿ ಉನ್ನತ ಶಿಖರವೇರಿದ  ಅಂಬೇಡ್ಕರ್ ಅವರು  ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ  ಶ್ರೇಷ್ಠ ಸಂವಿಧಾನ ನೀಡಿದ್ದು ಮಹಾ ಕೊಡುಗೆಯಾಗಿದೆ ಎಂದು ಹೇಳಿದರು.
 ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಅಧಿಕಾರಿ  ಪ್ರವೀಣಕುಮಾರ ಪಾಟೀಲ ಮಾತನಾಡಿ ಡಾ. ಅಂಬೇಡ್ಕರ್ ಅವರು  ಸಂವಿಧಾನ ಶಿಲ್ಪಿ ಎನಿಸಿಕೊಳ್ಳಬೇಕಾದರೆ ಕರಡು ಸಮಿತಿಯ ಏಳು ಜನ ಸದಸ್ಯರು ಬೇರೆ ಬೇರೆ ಕಾರಣಗಳಿಗೆ ದೂರವಾದರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ದಿನದ 21 ಗಂಟೆಗಳ ಕಾಲ ಸತತ ಅಧ್ಯಯನ ಮಾಡಿ  ದೇಶದ ಶ್ರೇಷ್ಠ ಸಂವಿಧಾನವನ್ನು  ರಚನೆ ಮಾಡಿದ್ದಾರೆ. ಅವರ ಪ್ರಯತ್ನದ ಹಿಂದೆ  ಅಂಬೇಡ್ಕರ್ ಅವರ ಪತಿ ರಮಾಬಾಯಿ ಅವರ ಕೊಡುಗೆ ಕೂಡ ಅಪಾರವಾದದ್ದು ಎಂದು ಹೇಳಿದರು.
 ಇದೇ ಸಂದರ್ಭದಲ್ಲಿ ನ್ಯಾಯಾಧೀಶರಾಗಿ ಮತ್ತು ಪಿಎಸ್ಐ ಹುದ್ದೆಗೆ ಆಯ್ಕೆಯಾದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
 ಸಮಾರಂಭದಲ್ಲಿ ತಾಪಂ ಅಧಿಕಾರಿ  ಶೇಖರ್ ಕರಬಸಪ್ಪಗೋಳ, ಡಿವೈಎಸ್ಪಿ  ಎಸ್. ವಿ ಗಿರೀಶ, ಪುರಸಭೆ  ಮುಖ್ಯಾಧಿಕಾರಿ ಈರಣ್ಣ ದಡ್ಡಿ, ತಾಲೂಕ ಸರ್ಕಾರಿ   ನೌಕರರ ಸಂಘದ ಅಧ್ಯಕ್ಷ ರಾಮಣ್ಣ ಧರಿಗೌಡರ, ಅಭಿಯಂತರ  ವೀರಣ್ಣ ವಾಲಿ, ಎಸ್ಎಸ್ ಮಾಕಾಣಿ, ಅರಣ್ಯಾಧಿಕಾರಿ ಪ್ರಶಾಂತ್ ಗಾಣಿಗೇರ, ರಾಜು ಕಾಂಬಳೆ, ಬಿಇಓ ಗೌಡಪ್ಪ ಖೋತ, ಡಾ. ಬಸಗೌಡ ಕಾಗೆ, ಪಿಎಸ್ಐ ಕುಮಾರ ಹಾಡಕರ, ಡಾ. ಹುಂಡೆಕಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪ್ರವೀಣ ಪಾಟೀಲ ಸ್ವಾಗತಿಸಿದರು. ಸಂಗಮೇಶ್ವರ ನಿರೂಪಿಸಿದರು. ಗೌಡಪ್ಪ ಖೋತ ವಂದಿಸಿದರು.
 ಫೋಟೋ ಶೀರ್ಷಿಕೆ : ಅಥಣಿಯಲ್ಲಿ ನಡೆದ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ  ಶಾಸಕ ಮಹೇಶ ಕುಮಟಳ್ಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
# ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.