ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತೀರ್ಮಾನ ಸ್ವಾಮೀಜಿ

ಬೆಂಗಳೂರು: ಪಂಚಮಸಾಲಿ ಸಮೂದಾಯಕ್ಕೆ 2ಎ ಮೀಸಲಾತಿ ಕುರಿತಂತೆ ಸರ್ಕಾರ ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಏ.21ರಿಂದ ಹೋರಾಟ ತೀವ್ರಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ನಮ್ಮ ಮನವಿಯನ್ನು ಪರಿಗಣಿಸಿ ಮೀಸಲಾತಿ ನೀಡುವ ಭರವಸೆ ನೀಡಿತ್ತು. ಆದರೆ ಈಡೇರಿಸಿಲ್ಲ. ನಾವು ಕೊಟ್ಟ ಗಡುವು ಏ.14 ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೂಡಲಸಂಗಮದಿಂದ ಅನಿರ್ದಿಷ್ಟ ಧರಣಿ ಹಾಗೂ ಹೋರಾಟವನ್ನು ನಡೆಸಲಾಗುವುದು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಬಹಳ ನಂಬಿಕೆ, ವಿಶ್ವಾಸವಿತ್ತು. ಆದರೆ ಅವರು ಸಹ ನಮ್ಮ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಕೈಗೊಂಡಿದ್ದೇವೆ ಎಂದರು.
ಮೊದಲು ಕೂಡಲಸಂಗಮದಲ್ಲಿ ಅನಿರ್ದಿಷ್ಟಾವ ಧರಣಿ ಮಾಡುತ್ತೇವೆ. ನಂತರ ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ಮಾಡುತ್ತೇವೆ. ಇದರ ಹೊರತು ಸರ್ಕಾರ ಪ್ರತಿಕ್ರಿಯಿಸದಿದ್ದರೆ ನಂತರ ಅನಿವಾರ್ಯವಾಗಿ ಬೆಂಗಳೂರಿಗೆ ಧಾವಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಹೇಳಿದ್ದಂಗೆ ಸ್ವಾಮೀಜಿ ಕೇಳುತ್ತಾರೆ ಅಂದುಕೊಂಡಿದ್ದಾರೆ. ಸ್ವಾಮೀಜಿಗಳು ಎಲ್ಲಿಯವರೆಗೆ ಕೇಳುತ್ತಾರೆ. ಬೊಮ್ಮಾಯಿ ಅವರಿಗೆ ಎಲ್ಲಾ ಸಮಾಜದ ಸ್ವಾಮೀಜಿ ಗಳ ಜೊತೆಗೆ ಸಂಬಂಧ ಇದೆ. ಶ್ರೀಗಳನ್ನು ಭೇಟಿ ಮಾಡಿ ಶಾಲು ಹಾಕಿದರೆ ಸ್ವಾಮೀಜಿಗಳು ಸುಮ್ಮನಾಗುತ್ತಾರೆ ಎಂದುಕೊಂಡಿದ್ದಾರೆ. ಆದರೆ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಗುಡುಗಿದರು.
ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ನಾವು ನಂಬಿದ್ದೇವೆ. ಅವರು ಮಾತ್ರ ನಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ. ಏನೋ ಸ್ವಾಮೀಜಿ ಹೇಳುತ್ತಾರೆ ಬಿಡಿ ಅಂದಂಗಿದೆ. ಉದಾಸೀನಾ ತೋರಿದ್ದಾರೆ ಎಂದರು. ನೀವು ಮಾತು ಕೊಟ್ಟಿದ್ದೀರಿ ಬೊಮ್ಮಾಯಿಯವರೇ. ನಿಮ್ಮ ಹತ್ರ ಆಗುತ್ತೋ ಇಲ್ಲವೋ ಹೇಳಿ ಬಿಡಿ.. ಕೊಟ್ಟ ಮಾತು ಉಳಿಸಿಕೊಳ್ಳುವಿರೋ ಇಲ್ಲವೋ ತಿಳಿಸಿಬಿಡಿ ಎಂದು ಒತ್ತಾಯಿಸಿದ್ದಾರೆ.