Belagavi News In Kannada | News Belgaum

ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ಹುಣಸಗಿ: ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಹಶಿಲ್ದಾರ್ ಅಶೋಕ ಸುರಪುರಕರ್ ಹೇಳಿದರು.

ಸಮೀಪದ ಕಾಮನಟಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿಗಳಲ್ಲಿನ ರೈತರ ಜಮೀನುಗಳಿಗೆ ಸಂಬಂಧಿಸಿದ ಕಂದಾಯ ಹಾಗೂ ಇತರೆ ಇಲಾಖೆಯಲ್ಲಿನ ಹಲವಾರು ರೀತಿಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಸಲುವಾಗಿ ಸರಕಾರವು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಪ್ರತಿಯೊಂದು ಹಳ್ಳಿಗಳಲ್ಲಿ ನಡೆಸುತ್ತಾ ಬರುತ್ತಿದೆ ಈ ನಿಟ್ಟಿನಲ್ಲಿ ರೈತರು ಮತ್ತು ಸಾರ್ವಜನಿಕರು ತಮ್ಮ ತಮ್ಮ ಹಳ್ಳಿಗಳಲ್ಲಿ ಇರುವಂತಹ ಕಂದಾಯ ಇಲಾಖೆಯ ಮತ್ತು ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತಹ ಸಾರ್ವಜನಿಕ ಸಮಸ್ಯೆಗಳ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರೇಡ್2 ತಹಶೀಲ್ದಾರ ಮಹಾದೇವಪ್ಪಗೌಡ ಬಿರಾದಾರ, ಸಿ.ಡಿ.ಪಿ.ಓ ಲಾಲ್‍ಸಾಬ್, ಪಿ.ಡಿ.ಒ ಸಿದ್ರಾಮಪ್ಪ ಪಾಟೀಲ, ಗ್ರಾ.ಪಂ.ಉಪಾಧ್ಯಕ್ಷ ಶಂಕರನಾಯಕ ಕರೇಕಲ್ಲ, ಮಹಮ್ಮದ್ ರಫೀಕ್, ಗವಿಸಿದ್ದಯ್ಯ, ಹಣಮರಡ್ಡಿ ಪಾಟೀಲ, ಬೂದೆಪ್ಪ ಪವಾರ, ಕಾರ್ಯದರ್ಶಿ ಕಾಸೀಂಸಾಬ್, ಹಸನಪಟೇಲ್, ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿವಿಧ ಇಲಾಖೆಯ 59 ಅರ್ಜಿಗಳು ಸ್ವೀಕೃತ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ- 19, ಪಂಚಾಯತ ರಾಜ್ ಇಲಾಖೆ-20, ಜೆಸ್ಕಾಂ ಇಲಾಖೆ-07, ಶಿಕ್ಷಣ ಇಲಾಖೆ-03, ಸಾರಿಗೆ ಇಲಾಖೆ-02, ತಾಲೂಕು ಆರೋಗ್ಯ ಇಲಾಖೆ-02, ಪಶುಸಂಗೋಪನೆ-02, ಕೃಷಿ ಇಲಾಖೆ-02, ಆಹಾರ ಇಲಾಖೆ-01, ಹಾಗೂ ಲೀಡ್ ಬ್ಯಾಂಕ್-01 ಹೀಗೆ ಒಟ್ಟು 59 ಅರ್ಜಿಗಳು ಸ್ವೀಕೃತವಾಗಿವೆ.