ಪತ್ನಿ, ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆಗೆ ಶರಣಾದ ತಂದೆ

ಲಕ್ನೋ: ವ್ಯಕ್ತಿಯೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.
ಶಿವದಾಸ್ ಸೋನೇಕರ್(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ರೀನಾ (30) ಮಗ ಆರವ್(5) ಹಾಗೂ ಮಗಳು ಸೆಜಲ್ ಮೃತ ದುರ್ದೈವಿಗಳು. ಶಿವದಾಸ್ ನಿರುದ್ಯೋಗಿಯಾಗಿದ್ದ. ಜೊತೆಗೆ ರೈಲ್ವೆ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಆರ್ಥಿಕ ಕೊರತೆಯಿಂದಾಗಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಶಿವದಾಸ್ ಪತ್ನಿ ಹಾಗೂ ಮಕ್ಕಳನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಇದಾದ ಬಳಿಕ ಶಿವದಾಸ್ ಕೋಣೆಯ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಬಾಗಿಲನ್ನು ತೆಗೆಯದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಖಾನಿಯಾ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಂಜಾನೆ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ರು ತಿಳಿಸಿದ್ದಾರೆ.