Belagavi News In Kannada | News Belgaum

ಉಪನ್ಯಾಸಕ ನಿಂದಿಸಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

ಚಿತ್ರದುರ್ಗ: ದ್ವಿತೀಯ ಪಿಯು ಪರೀಕ್ಷಾ ಪ್ರವೇಶ ಪತ್ರ ಪಡೆಯಲು ಬಂದ ವಿದ್ಯಾರ್ಥಿಯೊಬ್ಬ ಉಪನ್ಯಾಸಕರಿಂದ ಅವಮಾನ ಆಯಿತೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಮಗನ ಸಾವಿಂದ ಕಂಗೆಟ್ಟ ಪೋಷಕರು ಕಾಲೇಜು ಬಳಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ದಂಡಿನಕುರುಬರಹಟ್ಟಿ ಗ್ರಾಮದ ಮನೋಜ್ (18) ಮೃತ ದುರ್ದೈವಿ. ಚಿತ್ರದುರ್ಗ ನಗರದ ಸರ್ಕಾರಿ ಬಾಯ್ಸ್ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಏ. 22ರಿಂದ ವಾರ್ಷಿಕ ಪರೀಕ್ಷೆ ಶುರುವಾಗುತ್ತಿದ್ದು, ಪ್ರವೇಶಪತ್ರ ಪಡೆಯಲು ಸೋಮವಾರ ಕಾಲೇಜಿಗೆ ಹೋಗಿದ್ದ. ಈ ವೇಳೆ ಹಾಜರಾತಿ ಪ್ರಮಾಣ ಕಡಿಮೆ ಇದೆ, ಪ್ರವೇಶ ಪತ್ರ ಕೊಡಲ್ಲ ಎಂದು ಮ್ಯಾಥ್ಸ್ ವಿಭಾಗದ ಉಪನ್ಯಾಸಕ ಲೋಕೇಶಪ್ಪ ವಿದ್ಯಾರ್ಥಿಯ ಕಪಾಳಕ್ಕೆ ಹೊಡೆದಿದ್ದರು ಎನ್ನಲಾಗಿದೆ. ಸ್ನೇಹಿತರ ಎದುರು ನಿಂದಿಸಿ ಹೊಡೆದಿದ್ದಕ್ಕೆ ಮನನೊಂದುಕೊಂಡೇ ಮನೋಜ್​, ಮನೆಗೆ ವಾಪಸ್​ ತೆರಳಿದ್ದ. ಇಡೀ ದಿನ ಮಂಕಾಗಿಯೇ ಇದ್ದ. ಮಂಗಳವಾರ ಬೆಳಗ್ಗೆ ಎಕ್ಸಾಂ ಸಮೀಪಿಸುತ್ತಿದೆ. ಚೆನ್ನಾಗಿ ಓದಿಕೋ ಎಂದು ಮಗನಿಗೆ ಹೇಳಿ ತಂದೆ ಜಮೀನಿನತ್ತ ಹೋಗಿದ್ದರು.
ತಂದೆ ಹೊರಗೆ ಹೋದ ಬಳಿಕ ಮನೆಯಲ್ಲೇ ಮನೋಜ್​ ನೇಣಿಗೆ ಶರಣಾಗಿದ್ದಾನೆ. ಅಷ್ಟರಲ್ಲಿ ಪರಿಚಯಸ್ಥರು ಮನೋಜ್​ನಲ್ಲಿ ಕೆಳಗಿಳಿಸಿ ಆಸ್ಪತ್ರೆಗೆ ಕೂಡಲೇ ಕರೆದೊಯ್ದರಾದರೂ ಬದುಕಲಿಲ್ಲ. ಇಷಕ್ಕೆಲ್ಲಾ ಕಾಲೇಜು ಉಪನ್ಯಾಸಕರೇ ಕಾರಣ. ಕೊರೊನಾ ಹಿನ್ನೆಲೆ ಸರ್ಕಾರ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರವನ್ನು ತಡೆ ಹಿಡಿಯುವಂತಿಲ್ಲ. ಆದರೂ ನನ್ನ ಮಗನಿಗೆ ಅವಮಾನಿಸಿದ್ದಾರೆ ಎಂದು ಆಕ್ರೋಶಗೊಂಡ ಪೋಷಕರು ಕಾಲೇಜು ಆವರಣದಲ್ಲಿ ಶವ ಇಟ್ಟು ಆಕ್ರೋಶ ಹೊರಹಾಕಿದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////