Belagavi News In Kannada | News Belgaum

ಹಿಂಡಲಗಾ ಪಿಡಿಒ-ಗ್ರಾಪಂ ಅಧ್ಯಕ್ಷರ ವಿಚಾರಣೆ ನಡೆಸಿದ ಉಡುಪಿ ಪೊಲೀಸರು

ಬೆಳಗಾವಿ: ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಉಡುಪಿ ಪೊಲೀಸ್‌ ತಂಡ, ತಾಲೂಕಿನ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳಕರ ಮತ್ತು ನಿಕಟಪೂರ್ವ ಪಿಡಿಒ ಗಂಗಾಧರ ನಾಯಿಕ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.
ಸಂತೋಷ್‌ ಪಾಟೀಲ ಕಳೆದ ವರ್ಷ ಕಾಮಗಾರಿ ನಡೆಸಿದಾಗ ಪಿಡಿಒ ಆಗಿದ್ದ ಗಂಗಾಧರ ನಾಯಿಕ ಅವರನ್ನು ಸಹ  ಪೊಲೀಸರು ಪಂಚಾಯತಿಗೆ ಕರೆಸಿ ವಿಚಾರಣೆ ನಡೆಸಿದರು ಎನ್ನಲಾಗಿದೆ.  ಗುತ್ತಿಗೆದಾರರು, ಕಾಮಗಾರಿಗೆ ಮುನ್ನ ಪಂಚಾಯಿತಿಯಿಂದ ಅನುಮತಿ ಪಡೆದಿದ್ದರೇ, ಎಲ್ಲೆಲ್ಲಿ ಕಾಮಗಾರಿ ನಡೆಸಲಾಗಿದೆ. ಕೆಲಸ ಆಗಿರುವುದು ನಿಜವೇ, ಕಾರ್ಯಾದೇಶಪತ್ರವಿಲ್ಲದೆ ಹೇಗೆ ಅವಕಾಶ ಕೊಟ್ಟಿರಿ, ಇದು ಸರ್ಕಾರಕ್ಕೆ ವರದಿಯಾಗಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷರ ಮನೆಯಲ್ಲೇವಿಚಾರಣೆ:
 ಇನ್‌ಸ್ಪೆಕ್ಟರ್‌ ಶರಣಗೌಡ ಪಾಟೀಲ ನೇತೃತ್ವದ ತಂಡದವರು ಹಿಂಡಲಗಾ ಲಕ್ಷ್ಮೀ ನಗರ ಸಮರ್ಥ ಕಾಲೊನಿಯಲ್ಲಿರುವ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳಕರ ಮನೆಗೆ ಭೇಟಿ ನೀಡಿದ್ದರು. ಸಂತೋಷ್ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಅವರ ಹೇಳಿಕೆಗಳನ್ನು ದಾಖಲಿಸಿಕೊಂಡರು. ಅವರಿಂದ ಕೆಲವು ದಾಖಲೆಗಳನ್ನು ಪಡೆದರು. ಸಂತೋಷ್‌ ಮಾತಿನ ಮೇರೆಗೆ ಕಾಮಗಾರಿ ಮಾಡಿದ್ದ 12 ಉಪಗುತ್ತಿಗೆದಾರರು ಕೂಡ ಅಲ್ಲಿ ಹಾಜರಾಗಿ ಮಾಹಿತಿ ನೀಡಿದ್ದಾರೆ. ತಾವು ನಿರ್ವಹಿಸಿದ ಕೆಲಸ ಹಾಗೂ ಬರಬೇಕಾದ ಹಣದ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಕಾಮಗಾರಿ ನಡೆದಿರುವುದು ನಿಜ: ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಗೇಶ, ‘ಸಂತೋಷ್‌  50 ಲಕ್ಷ ಮೊತ್ತದ ಕಾಮಗಾರಿ ಸ್ವತಃ ನಿರ್ವಹಿಸಿದ್ದ. ಉಳಿದವುಗಳನ್ನು 12 ಮಂದಿಗೆ ಉಪ ಗುತ್ತಿಗೆ ಕೊಟ್ಟಿದ್ದ. ಎಲ್ಲರೂ ಸೇರಿ  4 ಕೋಟಿ ಮೊತ್ತದ ಒಟ್ಟು 108 ಕಾಮಗಾರಿಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಗುತ್ತಿಗೆದಾರರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸೋಮವಾರ ಭೇಟಿಯಾಗಿದ್ದಾರೆ. ನಾನೂ ಹೋಗಿದ್ದೆ. ಸರ್ಕಾರದೊಂದಿಗೆ ಮಾತನಾಡಿ ಹಣ ಕೊಡಿಸುವಂತೆ ಗುತ್ತಿಗೆದಾರರು ಕೋರಿದ್ದಾರೆ. ಕಾರ್ಯಾದೇಶ ಪತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಮಗಾರಿಗೆ ಪಂಚಾಯತಿಯಲ್ಲಿ ಯಾವುದೇ ಠರಾವು ಮಾಡಿಲ್ಲ. ಇಲಾಖೆಯ ವಿಶೇಷ ನಿಧಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಠರಾವು ಅಗತ್ಯವಿಲ್ಲ ಎಂದು ಸಂತೋಷ್‌ ಹೇಳಿದ್ದ. ಜಾತ್ರೆ ಹಿನ್ನೆಲೆಯಲ್ಲಿ ಇಲ್ಲಿ ಕಾಮಗಾರಿ ನಡೆದಿರುವುದು ನಿಜ ಎಂದು ಹೇಳಿದ್ದಾರೆ ಎನ್ನಲಾಗಿದೆ.///////