Belagavi News In Kannada | News Belgaum

ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

ಸಿನಿಮಾ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಗುಂಡು ಹಾರಿದ ಪರಿಣಾಮ ಯುವಕನೊಬ್ಬನ ಹೊಟ್ಟೆಗೆ ಗಾಯವಾದ ಘಟನೆ ಹಾವೇರಿಯಲ್ಲಿ ನಡೆದಿದೆ.

ಗಾಯಾಳುವನ್ನು ವಸಂತ ಕುಮಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ನಡೆದಿದೆ. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಗುಂಡುಹಾರಿದೆ. ಈ ಗುಂಡು ವಸಂತ ಕುಮಾರ್ ಹೊಟ್ಟೆಗೆ ತಗುಲಿದೆ. ಕೂಡಲೇ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಎಸ್‍ಪಿ ಹನುಮಂತರಾಯ ಖಚಿತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತ ಬಾಕ್ಸಾಫೀಸ್‍ನಲ್ಲಿ ಕೆಜಿಎಫ್-2 ಧೂಳೆಬ್ಬಿಸುತ್ತಿದೆ. ವಾರದ ದಿನಗಳಲ್ಲೂ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಸೋಮವಾರವಾದ ನಿನ್ನೆ ಹಿಂದಿ ಅವತರಣಿಕೆಯ ಕೆಜಿಎಫ್-ಚಾಪ್ಟರ್ 2 ಸಿನಿಮಾ 25.57 ಕೋಟಿ ಗಳಿಸಿ ಎಲ್ಲರನ್ನು ಬೆರಗಾಗಿಸಿದೆ. ಈವರೆಗೂ ಹಿಂದಿ ಮಾರ್ಕೆಟ್ ಒಂದ್ರಲ್ಲೇ 219.6 ಕೋಟಿ ರೂಪಾಯಿ ಗಳಿಸಿದೆ. ದಂಗಲ್ ಸಿನಿಮಾದ ಮೊದಲ ವಾರದ ಗಳಿಕೆ 270 ಕೋಟಿ.. ಕೆಜಿಎಫ್-2 ಸಿನಿಮಾದ ಸದ್ಯದ ವೇಗ ನೋಡಿದ್ರೇ ದಂಗಲ್ ಸಿನಿಮಾದ ದಾಖಲೆಯನ್ನು ಉಡೀಸ್ ಮಾಡೋದು ಖಚಿತ ಎಂಬಂತೆ ಕಾಣುತ್ತಿದೆ.

ರಾಜಮೌಳಿಯ ಆರ್‍ಆರ್‍ಆರ್ ಸಿನಿಮಾ ಕಳೆದ 25 ದಿನಗಳಲ್ಲಿ ಹಿಂದಿ ಮಾರ್ಕೆಟ್‍ನಲ್ಲಿ ಗಳಿಸಿದ್ದು 255 ಕೋಟಿ.. ಈ ದಾಖಲೆಯನ್ನು ಆರನೇ ದಿನಕ್ಕೆ ಕೆಜಿಎಫ್2 ಬ್ರೇಕ್ ಮಾಡಿದೆ. ಇನ್ನು 5 ದಿನದಲ್ಲಿ ಕೆಜಿಎಫ್ 625.12 ಕೋಟಿ ಕಲೆಕ್ಷನ್ ಮಾಡಿದೆ.