Belagavi News In Kannada | News Belgaum

100 ದಿನಗಳೊಳಗೆ 2 ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್‌ಫ್ಲಿಕ್ಸ್

ವಿಶ್ವದ ಪ್ರಮುಖ ಒಟಿಟಿ ಸ್ಟ್ರೀಮಿಂಗ್ ಕಂಪನಿ ನೆಟ್‌ಫ್ಲಿಕ್ಸ್ ದಶಕದಲ್ಲೇ ಮೊದಲ ಬಾರಿಗೆ ಭಾರೀ ಸಂಖ್ಯೆಯಲ್ಲಿ ತನ್ನ ಚಂದಾದಾರರನ್ನು ಕಳೆದುಕೊಂಡಿದೆ.

ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್ ರಷ್ಯಾದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಕಾರಣದಿಂದಾಗಿ ನೆಟ್‌ಫ್ಲಿಕ್ಸ್ ಬರೋಬ್ಬರಿ 2 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಈ ವರ್ಷದ ಮೊದಲ ತ್ರೈಮಾಸಿಕ ವರದಿಯಲ್ಲಿ ನೆಟ್‌ಫ್ಲಿಕ್ಸ್ 22.06 ಕೋಟಿ ಚಂದಾದಾರರನ್ನು ಹೊಂದಿರುವುದಾಗಿ ತಿಳಿಸಿದೆ. ಇದು ಕಳೆದ ವರ್ಷದ ವರದಿಗಿಂತಲೂ ಕಡಿಮೆಯಾಗಿದೆ.
ನೆಟ್‌ಫ್ಲಿಕ್ಸ್‌ನ ಕಳೆದ ವರ್ಷದ ನಿವ್ವಳ ಆದಾಯ 1.7 ಶತಕೋಟಿ ಡಾಲರ್(12.98 ಸಾವಿರ ಕೋಟಿ ರೂ.) ಇತ್ತು. ಈ ವರ್ಷ 1.6 ಶತಕೋಟಿ ಡಾಲರ್(12.22 ಸಾವಿರ ಕೋಟಿ ರೂ.)ಗೆ ಇಳಿಕೆಯಾಗಿದೆ ಎಂದು ಸಿಲಿಕಾನ್ ವ್ಯಾಲಿ ಟೆಕ್ ಸಂಸ್ಥೆ ವರದಿ ಮಾಡಿದೆ. ಈ ಅಂಕಿ ಅಂಶ ಬಿಡುಗಡೆಯ ಬಳಿಕ ನೆಟ್‌ಫ್ಲಿಕ್ಸ್ ಷೇರು ಸುಮಾರು ಶೇ.25 ರಷ್ಟು ಕುಸಿದಿದೆ.
ನಾವು ಬಯಸಿದಷ್ಟು ವೇಗವಾಗಿ ನಮ್ಮ ಆದಾಯ ಹೆಚ್ಚುತ್ತಿಲ್ಲ. 2020ರಲ್ಲಿ ಕೋವಿಡ್ ಕಾರಣದಿಂದ ನಮ್ಮ ಕಂಪನಿಯ ಆದಾಯ ಗಣನೀಯವಾಗಿ ಏರಿಕೆ ಕಂಡಿತ್ತು. 2021ರಲ್ಲಿ ಕೋವಿಡ್ ಇಳಿಕೆಯಿಂದಾಗಿ ನಿಧಾನಗತಿಯಲ್ಲಿ ಆದಾಯವೂ ಇಳಿಯತೊಡಗಿತು ಎಂದು ನೆಟ್‌ಫ್ಲಿಕ್ಸ್ ಇತ್ತೀಚೆಗೆ ತಿಳಿಸಿದೆ.