Belagavi News In Kannada | News Belgaum

ಸರ್ಕಾರಕ್ಕೆ ಪರ್ಸೆಂಟೇಜ್ ಕೊಟ್ಟು ಮಠ ಕಟ್ಟುವ ಅಗತ್ಯವಿಲ್ಲ: ನಿರಂಜನಪುರಿ ಶ್ರೀ

ಭಿಕ್ಷೆ ಬೇಡಿಯಾದರೂ ಮಠ ಕಟ್ಟುತ್ತೇವೆ ಹೊರತು ಸರ್ಕಾರಕ್ಕೆ ನಾವು ಪರ್ಸೆಂಟೇಜ್ ಕೊಟ್ಟು ಮಠ ಕಟ್ಟುವ ಅಗತ್ಯವಿಲ್ಲ ಎಂದು ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರ ಒಕ್ಕೂಟದ ಅಧ್ಯಕ್ಷ ನಿರಂಜನಪುರಿ ಶ್ರೀಗಳು ಹೇಳಿದರು.

ನಗರದ ಭೋವಿಗುರುಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ೩೦% ಕಮೀಷನ್ ಕೊಡಬೇಕಾಗಿದೆ ಎಂದು ಹೇಳಿದ್ದ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕಿಡಿಕಾರಿ ಮಠಾಧೀಶರಿಂದ ಯಾವುದೇ ಕಮೀಷನ್ ಪಡೆದಿಲ್ಲ ಅಂತ ಸರ್ಕಾರದ ಪರ ಬ್ಯಾಟ್ ಬೀಸಿದರು.

ಕರ್ನಾಟಕದ ಮಟ್ಟಿಗೆ ದಲಿತ ಮಠಗಳ ಪರಂಪರೆಯಲ್ಲಿ ದಲಿತ, ಹಿಂದುಳಿದ ಮಠಮಾನ್ಯಗಳು ಕೇವಲ ೨-೩ ದಶಕಗಳ ಇತ್ತೀಚಿನ ಇತಿಹಾಸ ಹೊಂದಿರುವುದು ನಾಡಿಗೆ ತಿಳಿದ ವಿಚಾರವಾಗಿದೆ. ಅಂತಹ ಸಂದರ್ಭದಲ್ಲಿ ಆರ್ಥಿಕವಾಗಿ, ಸ್ಥಿತಿವಂತ ಸಮುದಾಯಗಳು ಮಠಮಾನ್ಯಗಳ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ನಿರೀಕ್ಷೆಯಂತೆ ಮುನ್ನಡೆ ಆಗಲಿಲ್ಲ ಎಂದು ಹೇಳಿದರು.

ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳು ಮಠಮಾನ್ಯಗಳ ಮೂಲಕ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಂಕಲ್ಪತೊಟ್ಟಿದ್ದರು ಕೂಡ ಆರ್ಥಿಕವಾದ ಬೆಂಬಲ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಶೋಷಿತ ಸಮುದಾಯಗಳ ಆದಿಯಾಗಿ ಎಲ್ಲಾ ಮಠಗಳಿಗೆ ಗೌರವಪೂರ್ವಕವಾಗಿ ಅನುದಾನ ನೀಡಲು ಆರಂಭ ಮಾಡಿದರು ಎಂದು ತಿಳಿಸಿದರು.

ಅಲ್ಲಿಂದ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೆಗೂ ಮಠಮಾನ್ಯಗಳಿಗೆ ಬಂದಂತಹ ಅನುದಾನ ಸರ್ಕಾರಗಳು ವ್ಯವಸ್ಥಿತವಾಗಿ ಯೋಜನಾ ಬದ್ಧವಾಗಿ ಮತ್ತು ಸರ್ಕಾರದ ನಿಯಮಗಳ ಪ್ರಕಾರವಾಗಿ ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಡುಗಡೆ ಮಾಡಿವೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಮಠಗಳ ನಡುವೆ ಅಧಿಕಾರಿಗಳ ಸಂಪೂರ್ಣ ಜವಾಬ್ದಾರಿ ಹಾಗೂ ಉಸ್ತುವಾರಿಯಿಂದ ಬಿಡುಗಡೆಯಾಗಿರುವ ಅನುದಾನ ಮಠಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂಬ ವರದಿಯನ್ನು ಕಾಲಕಾಲಕ್ಕೆ ನೀಡುತ್ತಾ ಬರಲಾಗಿದೆ ಎಂದರು.

ಸರ್ಕಾರ ನೀಡಿರುವ ಅನುದಾನ ಸದ್ಬಳಕೆ ಮಾಡಿಕೊಂಡು ಅನೇಕ ಶೋಷಿತ ಸಮುದಾಯದ ಮಠಗಳು ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸಮಾಜವನ್ನು ಮುಖ್ಯವಾಹಿನಿಗೆ ತರುವಂತಹ ನಿಟ್ಟಿನಲ್ಲಿ ಸಂಪೂರ್ಣವಾದ ಅಭಿವೃದ್ಧಿ ಯೋಜನೆಗಳ ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ನುಡಿದರು.

ಇತ್ತೀಚಿನ ದಿನಗಳಲ್ಲಿ ಅನುದಾನ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಮುಖ್ಯವಾಗಿ ಉತ್ತರ ಕರ್ನಾಟಕದ ಪ್ರಮುಖ ಸ್ವಾಮೀಜಿಯವರು ನೀಡಿರುವ ಹೇಳಿಕೆಗೆ ಹಿಂದುಳಿದ ದಲಿತ ಮಠಾಧೀಶರು ಪ್ರತಿಕ್ರಿಯೆ ನೀಡಲೇಬೇಕಾಗಿದೆ. ಕಾರಣ ಅವರು ಹೇಳಿರುವಂತೆ ‘ಮಠ ಮಾನ್ಯಗಳಿಗೆ ನೀಡುವ ಅನುದಾನಕ್ಕೆ ೩೦% ಕಮೀಷನ್ ಕೊಡಬೇಕೆಂಬ” ವಿಚಾರಕ್ಕೆ ಪ್ರತಿಕ್ರಿಯೆ ನೀಡಬೇಕಾಗಿದೆ. ನಮಗೆ ಇದುವರೆಗೆ ಸರ್ಕಾರ ನೀಡಿರುವ ಅನುದಾನಕ್ಕೆ ಸರ್ಕಾರದ ನಿಯಮಾನುಸಾರ ಇಲಾಖೆ ಮುಖೇನ ಬಿಡುಗಡೆ ಮಾಡಿದೆ. ಪ್ರತಿ ಹಂತದ ಕಾಮಗಾರಿ ಅಭಿವೃದ್ಧಿ ಸಂಬಂಧಿಸಿದ ಇಲಾಖೆಗಳ ಮೂಲಕ ವರದಿ ಪಡೆದು, ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.