Belagavi News In Kannada | News Belgaum

ಮೇ 9 ರಂದು ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಖಚಿತ: ಮುತಾಲಿಕ್ ಎಚ್ಚರಿಕೆ

ಸರ್ಕಾರಕ್ಕೆ ಮೇ 1ರ ವರೆಗೆ ಗಡುವು ಕೊಡುತ್ತೇವೆ. ಅಷ್ಟರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸದಿದ್ದರೆ, ಮೇ 9 ರಂದು ಕರ್ನಾಟಕದ ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಮೂಲಕ ಭಜನೆ, ಸುಪ್ರಭಾತಗಳನ್ನು ಹಾಕಿಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಾವು ಈಗಾಗಲೇ ನೂರಾರು ದೇವಾಲಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಠಾಧೀಶರೊಂದಿಗೂ ಮಾತನಾಡಲಿದ್ದೇವೆ. ಮೇ 1 ರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ತೆಗೆಸಬೇಕು. ಇಲ್ಲದೇ ಇದ್ದರೆ ಮೇ 9 ರಂದು ಎಲ್ಲಾ ದೇವಸ್ಥಾನಗಳಲ್ಲಿ ಲೌಡ್ ಸ್ಪೀಕರ್ ಮೊಳಗುವುದು ಖಚಿತ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಮುತಾಲಿಕ್ ಹುಬ್ಬಳಿಯ ವಾಣಿ ಬಡಾವಣೆ ಅಕ್ರಮವಾಗಿ ನಿರ್ಮಾಣವಾಗಿದೆ. ಇದಕ್ಕೆ ಮೊದಲು ಜೆಸಿಬಿ ಹಾಕಿ ಕಿತ್ತು ಬಿಡಿ. ಹುಬ್ಬಳ್ಳಿಯಲ್ಲಿ ಗಲಭೆಯಾದರೂ ಎಚ್ಚೆತ್ತುಕೊಳ್ಳಿ. ಮೊನ್ನೆ ಗಲಭೆಯಾಗಿರುವ ಸಂದರ್ಭದಲ್ಲಿ ಅತೀ ಹೆಚ್ಚು ಜನ ಈ ಬಡಾವಣೆಯಲ್ಲೇ ಸೇರಿದ್ದರು ಎಂದು ತಿಳಿಸಿದರು.

ಇದನ್ನು ಒಡೆದು ಹಾಕಲು ಸರ್ಕಾರಕ್ಕೆ ಏನು ಭಯ? ಬಿಜೆಪಿ ಸರ್ಕಾರ ಯಾವುದಕ್ಕೆ ಭಯ ಪಡುತ್ತಿದೆ? ಇದನ್ನು ಒಡೆಯದೇ ಹೋದರೆ ನಾವು ಲೋಕಾಯುಕ್ತ ಕಚೇರಿ ಮುಂಭಾಗ ಪ್ರತಿಭಟನೆ ಮಾಡುತ್ತೇವೆ ಎಂದು ಕಿಡಿ ಕಾರಿದರು.