Belagavi News In Kannada | News Belgaum

ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಪೊಲೀಸರಿಂದ ನೋಟಿಸ್

ನಗರದ ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಮಲ್ಲೇಶ್ವರಂ 11ನೇ ಕ್ರಾಸ್‍ನಲ್ಲಿರುವ ವೇಣುಗೋಪಾಲ್ ಸ್ವಾಮಿ ದೇವಸ್ಥಾನದಲ್ಲಿ ಪ್ರತಿದಿನ ಪೂಜಾ ಸಮಯದಲ್ಲಿ ಶಬ್ದ ವಾಹಕದ ಮೂಲಕ ಜೋರಾಗಿ ಶಬ್ದ ಮಾಡುತ್ತಾರೆ. ಇದರಿಂದ ಅಕ್ಕಪಕ್ಕದಲ್ಲಿರುವ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಮೌಖಿಕ ದೂರಿನ ಆಧಾರದ ಮೇಲೆ ಪೊಲೀಸರು ದೇವಸ್ಥಾನಕ್ಕೆ ನೋಟಿಸ್ ನೀಡಿದ್ದಾರೆ.

ಹೀಗಾಗಿ ಇದೇ ತಿಂಗಳ 9ನೇ ತಾರಿಖು ಜನವಸತಿ ಪ್ರದೇಶದಲ್ಲಿ ರೂಲ್ಸ್ ಫಾಲೋ ಮಾಡುವಂತೆ ದೇವಸ್ಥಾನಕ್ಕೆ ಮಲ್ಲೇಶ್ವರಂ ಪೊಲೀಸರು ನೋಟಿಸ್ ನೀಡಿದ್ದು, ಮಾಲಿನ್ಯ 2000 ನಿಯಮದ ಶೆಡ್ಯೂಲ್ ರೂಲ್ 3(1) ಮತ್ತು 4 (1) ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೂ 55 ಡೆಸಿಬಲ್ ಮತ್ತು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೂ 45 ಡೆಸಿಬಲ್ ಶಬ್ದ ಮೀರದಂತೆ ಪೂಜಾ ಸಮಯದಲ್ಲಿ ಶಬ್ದವಾಹಕ ಬಳಸಬೇಕು. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಜರುಗಿಸುವುದಾಗಿ ತಿಳಿಸಲಾಗಿದೆ.