Belagavi News In Kannada | News Belgaum

ನನ್ನಿಂದ ತಪ್ಪಾಯ್ತು – ತಂಬಾಕು ಬ್ರ್ಯಾಂಡ್ ಅಂಬಾಸಿಡರ್ ಪಟ್ಟ ತ್ಯಜಿಸಿದ ಅಕ್ಷಯ್

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಇತ್ತೀಚೆಗೆ ಪಾನ್ ಮಸಾಲಾ ಬ್ರ್ಯಾಂಡ್ ಅಂಬಾಸಿಡರ್ ಆಗುತ್ತಿರುವುದರ ಬಗ್ಗೆ ಭಾರೀ ಟ್ರೋಲ್ ಆಗಿದ್ದರು. ಹಲವು ದಿನಗಳಿಂದ ಅಕ್ಷಯ್ ಅಭಿಮಾನಿಗಳು ಅವರ ಈ ನಡೆಗೆ ಬೇಸರ ವ್ಯಕ್ತಪಡಿಸಿದ್ದರಿಂದ ಇದೀಗ ಅಕ್ಷಯ್ ಬ್ರ್ಯಾಂಡ್ ಅಂಬಾಸಿಡರ್ ಪಟ್ಟವನ್ನು ತ್ಯಜಿಸುತ್ತಿರುವುದಾಗಿ ಘೋಷಿಸಿದ್ದಾರೆ.

ಪಾನ್ ಮಸಾಲಾ ಬ್ರಾಂಡ್ ಒಂದರ ಜಾಹಿರಾತಿಗಾಗಿ ಬಾಲಿವುಡ್ ತಾರೆಗಳಾದ ಶಾರೂಖ್ ಖಾನ್, ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಕೆಲಸ ಮಾಡುತ್ತಿದ್ದರು. ಆದರೆ ಇದರಿಂದ ಅಕ್ಷಯ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ಅಕ್ಷಯ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ.

ಏಪ್ರಿಲ್ 21ರ ಮಧ್ಯರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ ಅಕ್ಷಯ್, ನನ್ನನ್ನು ಕ್ಷಮಿಸಿ, ನನ್ನ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ನಾನು ಕ್ಷಮೆ ಯಾಚಿಸಲು ಬಯಸುತ್ತೇನೆ. ಕಳೆದ ಕೆಲವು ದಿನಗಳಿಂದ ನಿಮ್ಮ ಪ್ರತಿಕ್ರಿಯೆಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ನಾನು ತಂಬಾಕನ್ನು ಅನುಮೋದಿಸಿಲ್ಲ ಹಾಗೂ ಅನುಮೋದಿಸುವುದಿಲ್ಲ. ಆದರೆ ನಾನು ಗೌರವಿಸುತ್ತೇನೆ. ವಿಮಲ್ ಎಲೈಚಿ ಅವರೊಂದಿಗೆ ನನ್ನ ಒಡನಾಟ ನಿಮ್ಮ ಭಾವನೆಗಳಿಗೆ ನೋವುಂಟು ಮಾಡಿರುವುದು ನನಗೆ ತಿಳಿದಿದೆ. ಹೀಗಾಗಿ ನಾನು ಇದರಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಬರೆದಿದ್ದಾರೆ.

ನಾನು ಈ ಜಾಹೀರಾತಿನಿಂದ ಪಡೆದ ಹಣವನ್ನು ಒಳ್ಳೆಯ ಕೆಲಸಕ್ಕೆ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ನನ್ನ ಹಾಗೂ ಬ್ರ್ಯಾಂಡ್‌ನೊಂದಿಗಿರುವ ಒಪ್ಪಂದದ ಅವಧಿ ಮುಗಿಯುವವರೆಗೂ ಜಾಹಿರಾತನ್ನು ಪ್ರಸಾರ ಮಾಡುವುದನ್ನು ಕಂಪನಿ ಮುಂದುವರಿಸಬಹುದು. ಆದರೆ ಮುಂದೆ ಯಾವುದೇ ರೀತಿಯಾಗಿ ಹೆಜ್ಜೆ ಇಡುವಲ್ಲಿ ಅತ್ಯಂತ ಜಾಗರೂಕನಾಗಿ ಇರುತ್ತೇನೆ ಎಂಬ ಭರವಸೆ ನೀಡುತ್ತೇನೆ ಎಂದಿದ್ದಾರೆ.

ಅಕ್ಷಯ್ ಕುಮಾರ್ ಈ ಹಿಂದೆ ಮದ್ಯ ಹಾಗೂ ತಂಬಾಕು ಸೇವನೆ ವಿರುದ್ಧ ಮಾತನಾಡಿರುವ ವೀಡಿಯೋಗಳು ಬಹಳ ಪ್ರಸಿದ್ಧಿ ಪಡೆದಿದ್ದವು. ಆದರೆ ಇತ್ತೀಚೆಗೆ ಅಕ್ಷಯ್ ಪಾನ್ ಮಸಾಲಾ ಜಾಹಿರಾತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಬೇಸರ ತಂದಿದ್ದಾರೆ.