Belagavi News In Kannada | News Belgaum

ನೀವು-ನಾನು ಒಟ್ಟಿಗೆ ವಿಧಾನಸೌಧದ ಮೆಟ್ಟಿಲೇರಿದ್ದು-ಶ್ರೀರಾಮುಲು ವಿರುದ್ಧ ರಾಜೂ ಗೌಡ ಕಿಡಿ

ರಾಜೂ ಗೌಡ ನಮ್ಮ ಹೆಸರಿನ ಮೇಲೆ ಬೆಳೆದಿದ್ದಾರೆ ಎಂಬ ಸಚಿವ ಶ್ರೀ ರಾಮುಲು ಹೇಳಿಕೆಗೆ ಸುರಪುರದ ಶಾಸಕ ರಾಜೂ ಗೌಡ ಪ್ರತಿಕ್ರಿಯಿಸಿದ್ದು, ಶ್ರೀರಾಮುಲು ಅವರು ಎಲ್ಲೇ ಮಾತನಾಡಿದರೂ ವಿಚಾರ ಮಾಡಿ ಮಾತನಾಡಬೇಕು. ನಾನು ಬೆಳೆದದ್ದು,  ನನ್ನ ಕ್ಷೇತ್ರ ಸುರಪುರದ ಜನರಿಂದ ಹೊರತು ಶ್ರೀರಾಮುಲು ಅವರಿಂದ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ರಾಜೂ ಗೌಡ , 7.5 ಮೀಸಲಾತಿ ಹೋರಾಟ ನಾನೇ ಆರಂಭಿಸಿದ್ದೇನೆ ಅಂತ ಶ್ರೀರಾಮುಲು ಹೇಳಿದ್ದಾರೆ. ಶ್ರೀರಾಮುಲು ಹುಟ್ಟೋದಕ್ಕೂ ಮುನ್ನವೇ 7.5 ಮೀಸಲಾತಿ ಹೋರಾಟ ಆರಂಭವಾಗಿದೆ. ಈ ಬಗ್ಗೆ ಹಾವನೂರ ಹಾಗೂ ವಾಲ್ಮೀಕಿ ಗುರುಪೀಠದ ಸ್ವಾಮೀಜಿಗಳು ಪಾದಯಾತ್ರೆ ಮಾಡಿದ್ದಾರೆ.  ಹಲವಾರು ಜನ ಕೋರ್ಟ್​ ಮೆಟ್ಟಿಲೇರಿದ್ದಾರೆ. ಶ್ರೀರಾಮುಲು ಒಬ್ಬರಿಂದಲೇ ಏನು ಆಗಿಲ್ಲ. ಗೆದ್ದು ಬಂದ 24 ಗಂಟೆಗಳಲ್ಲಿ ಮೀಸಲಾತಿ ಜಾರಿ ಮಾಡುತ್ತೇನೆ ಎಂದಿದ್ದರು. ಅಲ್ಲದೇ ರಾಜಕೀಯ ನಿವೃತ್ತಿ ಎಂದಿದ್ದರು. ಈ ರೀತಿಯ ಭಾವನಾತ್ಮಕ ಹೇಳಿಕೆಗಳು ಸರಿಯಲ್ಲ ಎಂದರು.

ಇನ್ನು ಶ್ರೀರಾಮುಲು ಅವರೇ ನಿಮಗೆ ನೆನಪಿನ ಶಕ್ತಿ ಕಡಿಮೆಯಾಗಿದರೆ ಯಾರಿಗಾದರು ಕೇಳಿ ತಿಳಿದುಕೊಳ್ಳಿ. ನೀವು ನನಗಿಂತ ವಯಸ್ಸಿನಲ್ಲಿ ಸೀನಿಯರ್​ ಇರಬಹುದು. ಆದರೆ ರಾಜಕೀಯವಾಗಿ ಅಲ್ಲ. ನೀವು ನಾನು 2004ರಲ್ಲಿಯೇ ವಿಧಾನಸೌಧದ ಮೆಟ್ಟಿಲೇರಿದ್ದು. ನಾನು 25ವರ್ಷದನಾಗಿದ್ದಾಗ ಸ್ವತಂತ್ರವಾಗಿ ಶಾಸಕನಾಗಿದ್ದೇನೆ‌. ನಿಮ್ಮ ಮನೆಯಲ್ಲಿ ಮೂರು ಜನ ಸೋತಿದ್ದಾರೆ. ನೀವು ನನ್ನನ್ನ ಹೇಗೆ ಬೆಳೆಸುತ್ತೀರಿ. ನಾನು ಸುರಪುರದ ಜನತೆಯ ಆಶೀರ್ವಾದದ ಮೇಲೆ ಬೆಳೆದಿದ್ದೇನೆ ಎಂದು ಹೇಳಿದರು.