Belagavi News In Kannada | News Belgaum

ಗ್ರಾಮೀಣ ಕ್ರೀಡೆಗಳನ್ನು ಉಳಿಸಬೇಕಾದ ಅಗತ್ಯವಿದೆ: ತಳವಾರ

ಹುಕ್ಕೇರಿ : ಪಾಶ್ಚಾತ್ಯ ಹಾವಳಿಯಿಂದ ಸ್ವದೇಶಿ ಕ್ರೀಡೆಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಪಜಾ, ಪಪಂಗಳ ಜನಸೇವಾ ಸಂಸ್ಥೆ ಅಧ್ಯಕ್ಷ ಸುರೇಶ ತಳವಾರ ಅಭಿಪ್ರಾಯಪಟ್ಟರು.

ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರರ 131ನೇ ಜಯಂತಿ ನಿಮಿತ್ತ ಶನಿವಾರ ಸಂಜೆ ಆರಂಭವಾದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಸಮೂಹ ಪಾಶ್ಚಾತೀಕರಣಕ್ಕೆ ಮಾರು ಹೋಗಿ ಸ್ವದೇಶಿ ಮೂಲದ ಕ್ರೀಡೆಗಳನ್ನು ಮರೆಯುತ್ತಿದ್ದಾರೆ.

 

ಅದರಲ್ಲೂ ಗ್ರಾಮೀಣ ಭಾಗದ ಇತಿಹಾಸ ಪರಂಪರೆ ಹೊಂದಿರುವ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಹಾಗಾಗಿ ಮುಂದಿನ ಪೀಳಿಗೆಗಾಗಿ ಗ್ರಾಮೀಣ ಕ್ರೀಡೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅತಿ ಅಗತ್ಯವಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸ್ಪರ್ಧೆ ಮಾಡುವ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಅವರು ಹೇಳಿದರು.

ಮುಖಂಡರಾದ ಬಸವರಾಜ ಖಡಕಭಾವಿ, ಗುರಪ್ಪ ತಳವಾರ, ಪ್ರೊ.ಡಿ.ಶ್ರೀಕಾಂತ, ಯಮನಪ್ಪ ಸನರಾಮಗೋಳ, ಭೀಮಸೇನ ತಳವಾರ, ನಿಂಗಪ್ಪಾ ಕಾಂಬಳೆ, ಬಸವರಾಜ ತಳವಾರ ಮತ್ತಿತರರು ಉಪಸ್ಥಿತರಿದ್ದರು.

ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 30 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿವೆ. ಪ್ರಥಮ 25000ರೂ, ದ್ವಿತೀಯ 15000ರೂ, ತೃತೀಯ 10000ರೂ, ಚತುರ್ಥ 10000ರೂ ಬಹುಮಾನಗಳಿವೆ ಎಂದು ಸಂಘಟಕರು ತಿಳಿಸಿದ್ದಾರೆ.