Belagavi News In Kannada | News Belgaum

ಹೈಟೆಕ್ ಅಸ್ಪೃಶ್ಯತೆ ಆಚರಣೆಯಲ್ಲಿದೆ: ಅಕ್ಷತಾ

ಹುಕ್ಕೇರಿ : ಸ್ವಾತಂತ್ರ್ಯ ದೊರೆತು ಏಳು ದಶಕ ಕಳೆದರೂ ದಲಿತರ ಮೇಲೆ ದೌರ್ಜನ್ಯ ನಿಂತಿಲ್ಲ.  ಇಂದಿಗೂ ಕೂಡ ಹೈಟೆಕ್ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ದೇಶದ ದುರಂತ ಎಂದು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಕ್ಷತಾ ಖೇದ ವ್ಯಕ್ತಪಡಿಸಿದರು.

ತಾಲೂಕಿನ ಅರ್ಜುನವಾಡ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ ಜನಜಾಗೃತಿ ವೇದಿಕೆಯ ಗ್ರಾಮ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದಲಿತರ ಮೇಲೆ ಈ ಹಿಂದೆ ಹೇರಲಾಗಿದ್ದ ಗಡಿಗೆ, ಕಸಬರಿಗೆಯಂಥ ಅಸ್ಪೃಶ್ಯತೆ ಹೋಗಿರಬಹುದು. ಆದರೆ, ಹೈಟೆಕ್ ಅಸ್ಪøಶ್ಯತೆ ಆಚರಣೆಯಲ್ಲಿದೆ ಎಂದರು.

ಆಳುವ ವರ್ಗದ ಕುಮ್ಮಕ್ಕಿನಿಂದ ನಿತ್ಯ ಒಂದಿಲ್ಲೊಂದು ಪ್ರದೇಶದಲ್ಲಿ ದಲಿತರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿವೆ. ಸಂವಿಧಾನ ಸಮರ್ಪಕ ರೀತಿಯಲ್ಲಿ ಜಾರಿಯಾಗುತ್ತಿಲ್ಲ. ಶೇ.97 ರಷ್ಟಿರುವ ಹಿಂದುಳಿದ ವರ್ಗಗಳು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಿಂದ ವಂಚಿತಗೊಂಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯಿಂದ ದೀನದಲಿತರ ಪರಿಸ್ಥಿತಿ ಅಧೋಗತಿಗೆ ಹೋಗಿದೆ ಎಂದು ಅವರು ಹೇಳಿದರು.

ಡಾ.ಬಾಬಾ ಅಂಬೇಡ್ಕರನ್ನು ಅರ್ಥೈಸಿಕೊಳ್ಳಬೇಕೆಂದರೆ ಆಳವಾದ ಸಮುದ್ರಕ್ಕೆ ಇಳಿದಂತೆ. ಅವರ ಬದುಕು, ಬರಹ ಓದಬೇಕೆಂದರೆ ನಮ್ಮೆಲ್ಲ ಆಯುಶ ಸಾಕಾಗದು. ಅಂಬೇಡ್ಕರ ಜನಜಾಗೃತಿ ವೇದಿಕೆಯಿಂದ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಬರುವ ದಿನಗಳಲ್ಲಿ ಈ ಸಂಘಟನೆಯಿಂದ ಯುವಕರನ್ನು ಜಾಗೃತಿಗೊಳಿಸುವಂಥ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಅಂಬೇಡ್ಕರ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ತವಗಮಠದ ಬಾಳಯ್ಯಾ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ಬಸವರಾಜ ಕೋಳಿ, ಆನಂದ ಕೆಳಗಡೆ, ಶ್ರೀನಿವಾಸ ವ್ಯಾಪಾರಿ, ಲಕ್ಷ್ಮಣ ಹೂಲಿ, ಪಿಂಟು ಸೂರ್ಯವಂಶಿ, ಕೆಂಪಣ್ಣಾ ಶಿರಹಟ್ಟಿ, ಮಂಜು ಪಡದಾರ, ಕಿರಣ ಕೋಳಿ, ಮಂಜು ಮರಡಿ, ಬಸವರಾಜ ದೇವುಗೋಳ, ಸುನೀಲ ಖಾತೇದಾರ, ಬಾಹುಸಾಹೇಬ ಪಾಂಡ್ರೆ, ಆನಂದ ಖಾತೇದಾರ, ಗಂಗಾರಾಮ ಹುಕ್ಕೇರಿ, ಮಲ್ಲು ಕುರಣಿ, ಮಾರುತಿ ಕೋಳಿ, ರಾಜೇಂದ್ರ ದಾಸರ, ರಾಜು ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.