Belagavi News In Kannada | News Belgaum

ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಆದ್ಯತೆ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಕರೆ

ಅಥಣಿ: ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಆದ್ಯತೆ ನೀಡಿದಾಗ ಮಾತ್ರ ಡಾ.ಬಿ.ಆರ್.‌ ಅಂಬೇಡ್ಕರ್‌ ಅವರ ಜಯಂತಿಗೆ ಮೇರುಗು ಬರುತ್ತದೆ  ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ತಾಲೂಕಿನ ಸತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.‌ ಅಂಬೇಡ್ಕರ್‌ ಅವರ 131ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ಬುದ್ದ, ಬಸವ, ಡಾ. ಅಂಬೇಡ್ಕರ್‌ ಅವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಬಸವಣ್ಣ, ಡಾ.ಬಿ.ಆರ್.‌ ಅಂಬೇಡ್ಕರ್‌ ಅವರು ತಮ್ಮ ಅವಧಿಯಲ್ಲಿ ಸದಾ ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದರು. ಪ್ರಸ್ತುತವೂ ಅನೇಕ ಕುಟುಂಬಗಳು ಮೂಢನಂಬಿಕೆಗಳಿಗೆ ಬಲಿ ಆಗುತ್ತಿದ್ದು, ಅವುಗಳನ್ನು ತಡೆಯಲು ಯುವಕರು ಮುಂದಾಗಬೇಕೆಂದು ಸಲಹೆ ನೀಡಿದರು.

ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡಲು ಮಾನವ ಬಂಧುತ್ವ ವೇದಿಕೆ ಮೂಲಕ ನಾವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಬಸವಣ್ಣವರು ಸಮಾನತೆ ಬಗ್ಗೆ ಅರಿವು ಮೂಡಿಸಿದರು. ಸಾವಿತ್ರಿಭಾಯಿ ಫುಲೆ ಮಹಿಳೆಯರಿಗೆ ಶಿಕ್ಷಣ ನೀಡಲು ಆದ್ಯತೆ ನೀಡಿದರು. ಡಾ. ಅಂಬೇಡ್ಕರ್‌ ದೇಶಕ್ಕೆ ಒಳ್ಳೆಯ ಸಂವಿಧಾನ ನೀಡಿ ದೇಶದ ಪ್ರಗತಿಗೆ ಹೆಸರಾದರು. ಕಾರಣ ಇಂತಹ ಮಹಾತ್ಮರು ನೀಡಿದ ಸಂದೇಶಗಳನ್ನು ತಿಳಿದುಕೊಳ್ಳಬೇಕು ಎಂದ ಅವರು, ಅಂದು ಬಸವಣ್ಣ, ಡಾ. ಅಂಬೇಡ್ಕರ್‌, ಸಾವಿತ್ರಿಬಾಯಿ ಫುಲೆ ಅವರನ್ನು ತಿರಸ್ಕರಿಸಿದವರೂ ಇಂದು ದೇಶ ಭಕ್ತಿಯ ಪಾಠ ಹೇಳುತ್ತಿದ್ದಾರೆ. ಇದರ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು.

ಜನವಾಡ ಗ್ರಾಮದ ಮಲ್ಲಿಕಾರ್ಜುನ ಸ್ವಾಮೀಜಿ, ಕೊಪ್ಪಳ ಗವಿಸಿದ್ದೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಹಿರೇಪಡಸಲಗಿ ಗ್ರಾಮದ ಶಶಿಕಾಂತ ಗೂರುಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಶಾಸಕ ಮಹೇಶ್‌ ಕುಮಟಳ್ಳಿ, ಕಾಂಗ್ರೆಸ್‌ ಮುಖಂಡರಾದ ಸದಾಶಿವ ಬೂಟಾಳಿ, ಬಸವರಾಜ ಬೂಟಾಳಿ, ರಮೇಶ ಸಿಂದಗಿ, ಸತ್ಯಪ್ಪಾ ಬಾಗೆಣ್ಣವರ್‌,  ಬಿ.ಆರ್.ಪಾಟೀಲ್‌,  ಧರೇಪ್ಪ ಟಕ್ಕಣ್ಣವರ್‌, ಜಡೇಪ್ಪಾ ಕುಂಬಾರ್‌, ಮಲ್ಲಪ್ಪಾ ಹಂಚಿನಾಳ, ಸೇರಿದಂತೆ ಸತ್ತಿ ಗ್ರಾಮದ ಮುಖಂಡರು ಇದ್ದರು.