ಸಂವಿಧಾನ ಸಂರಕ್ಷಣಾ ಸಮಾವೇಶ
ಸಂವಿಧಾನಕ್ಕೆ ಆಪತ್ತು ಬಂದಾಗ ಹೋರಾಟಕ್ಕಿಳಿದು ಸಂವಿಧಾನ ಸಂರಕ್ಷಿಸಿ: ಸತೀಶ್ ಜಾರಕಿಹೊಳಿ

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಎಂ. ಐ. ಕಚೇರಿ ಮುಂಭಾಗ ಸಂವಿಧಾನ ಸಂರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಹಾಗೂ ಸಂವಿಧಾನ ಸಂರಕ್ಷಣಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದಿಂದ ದೀನ ದಲಿತರಿಗೆ, ಹಿಂದುಳಿದವರಿಗೆ ಇಂದು ಆರ್ಥಿಕ, ಸಾಮಾಜಿಕವಾಗಿ ಬೆಳೆಯಲು ಸಾಧ್ಯವಾಗಿದ್ದು, ಕಾರಣ ಡಾ. ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಅಧ್ಯಯನ ಮಾಡಬೇಕೆಂದು ಸಲಹೆ ನೀಡಿದರು.
ಇಂದು ಮನುವಾದಿಗಳು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಸಂವಿಧಾನಕ್ಕೆ ಆಪತ್ತು ಬಂದಾಗ ನಾವು ಹೋರಾಟಕ್ಕೆ ಇಳಿಯಬೇಕು. ಸಂವಿಧಾನವನ್ನು ಗೌರವಿಸುವುದನ್ನು ಕಲಿಯಬೇಕೆಂದು ತಿಳಿಸಿದರು.
ಈ ದೇಶದ ಮೂಲ ನಿವಾಸಿಗಳು ಯಾರು ಎಂಬುವುದನ್ನು ಚರ್ಚೆ ನಡೆಸಬೇಕಿದ್ದು, ಬುದ್ದ, ಬಸವ, ಡಾ. ಅಂಬೇಡ್ಕರ್ ಅವರ ವಿಚಾರಗಳನ್ನು ಸಮಾಜದ ಮುಂದೆ ಬೆಳಕು ಚೆಲ್ಲುವ ಕೆಲಸವಾಗಬೇಕಿದ್ದು, ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಉರಿಲಿಂಗ ಪೆದ್ದಿಗಳ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಚ್.ಸಿ. ಮಹಾದೇವಪ್ಪಾ, ಬಸವರಾಜ ರಾಯರಡ್ಡಿ, ಶಾಸಕ ಅಮರೇಗೌಡಾ ಬಯ್ಯಾಪೂರ, ಶಿವನಗೌಡ ನಾಯಕ, ಸಂಸದ ಸಂಗಣ್ಣ ಕರಡಿ, ಆರ್.ಬಿ. ತಿಮ್ಮಾಪುರ, ಶಿವರಾಜ ತಂಗಡಗಿ, ಡಾ.ಎಸ್.ಎಚ್. ಅನುಪಮಾ, ಶಾಸಕ ರಾಘವೇಂದ್ರ ಹಿಟ್ನಾಳ, ಬಸವರಾಜ ತಡಸಗೂರ್, ಭೀಮಪ್ಪ ಹಾವಳಿ, ರತ್ನಾಕರ್, ದಲಿತ ಮುಖಂಡ ನಾಗರಾಜ ಸೇರಿದಂತೆ ಪಕ್ಷಾತೀತ ಹಾಗೂ ಜಾತ್ಯಾತೀತ ವಾಗಿ ಜನಪ್ರತಿನಿಧಿಗಳು ಭಾಗವಹಿಸಿದ್ದರು.