Belagavi News In Kannada | News Belgaum

ರಾಜಕುಮಾರ್ ಕನ್ನಡ ಸಂಸ್ಕೃತಿಯ ರಾಯಭಾರಿ: ಅಶೋಕ ದುಡಗುಂಟಿ

ಡಾ.ರಾಜಕುಮಾರ್ 94ನೇ  ಜನ್ಮದಿನಾಚರಣೆ

ಬೆಳಗಾವಿ, ಏ.24: ನಿಷ್ಕಳಂಕ ವ್ಯಕ್ತಿತ್ವ, ಅದ್ಭುತ ನಟನೆ, ಕರ್ತವ್ಯ ಪ್ರಜ್ಞೆ ಹಾಗೂ ಸರಳ, ಸಜ್ಜನಿಕೆಯಿಂದಲೇ ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿರುವ ಡಾ.ರಾಜಕುಮಾರ್ ಅವರು ಕನ್ನಡ ಸಂಸ್ಕತಿಯ ರಾಯಭಾರಿಯಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಹೇಳಿದರು.
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ವಾರ್ತಾಭವನದಲ್ಲಿ ಭಾನುವಾರ (ಏ.24) ಏರ್ಪಡಿಸಲಾಗಿದ್ದ ಡಾ.ರಾಜಕುಮಾರ್ ಅವರ 94ನೇ‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಡಾ.ರಾಜ್ ಅವರ ಪ್ರತಿಯೊಂದು ಚಿತ್ರಗಳಲ್ಲಿ ಸಾಮಾಜಿಕ ಸಂದೇಶಗಳಿರುತ್ತಿದ್ದವು. ಅವರ ಚಿತ್ರಗಳಿಂದ ಪ್ರೇರಿತಗೊಂಡ ಅನೇಕ ಜನರು ತಮ್ಮ ಬದುಕನ್ನು ಬಂಗಾರವನ್ನಾಗಿಸಿಕೊಂಡಿದ್ದಾರೆ.
ಡಾ.ರಾಜಕುಮಾರ್ ಅವರು ಕನ್ನಡ ಸಂಸ್ಕೃತಿಯ ರಾಯಭಾರಿಯಾಗಿದ್ದರು. ಕನ್ನಡ ನೆಲ-ಜಲ, ಭಾಷೆಯ ಸಂರಕ್ಷಣೆಗೆ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಕರ್ನಾಟಕ ರತ್ನ, ನಟಸಾರ್ವಭೌಮ, ಮೇರುನಟರಾದ ಡಾ.ರಾಜಕುಮಾರ್ ಆಡುಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿಯಲ್ಲಿ ರಾಜ್ಯದಲ್ಲಿ ಡಾ.ರಾಜ್ ಬಗ್ಗೆ ಗೊತ್ತಿಲ್ಲದವರಿಲ್ಲ.
ಡಾ.ರಾಜ್ ಅವರು ಗೋಕಾಕ ಚಳವಳಿಗೆ ಧುಮುಕಿದಾಗ ಸೇರುತ್ತಿದ್ದ ಅಪಾರ ಜನಸ್ತೋಮವು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.
ನಂತರ ಮಾತನಾಡಿದ ರಾಜಶೇಖರ್ ತಳವಾರ ಅವರು, ಕನ್ನಡಿಗರ ಸಾಕ್ಷಿಪ್ರಜ್ಞೆಯಾಗಿರುವ ಮೇರುನಟ ಡಾ.ರಾಜಕುಮಾರ್ ಅವರ ಪುತ್ಥಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಬಳಿ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು.
ಪತ್ರಕರ್ತ ಪುರುಷೋತ್ತಮ್ ಅವರು ಡಾ.ರಾಜಕುಮಾರ್ ಅವರ ಕುರಿತು ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಅವರು‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತರಾದ ಶ್ರೀಶೈಲ್ ಮಠದ, ಇಮಾಮಹುಸೇನ್ ಗೂಡುನವರ, ಶಿವರಾಯ ಏಳುಕೋಟಿ, ಸಂಪತ್ ಕುಮಾರ್ ಮುಚಳಂಬಿ, ಸುಭಾನಿ ಮುಲ್ಲಾ, ರಾಜಶೇಖರ್ ಹಿರೇಮಠ, ಸುರೇಶ್ ನೇರ್ಲಿ, ಛಾಯಾಗ್ರಾಹಕ ಪಿ.ಕೆ.ಬಡಿಗೇರ, ಮುತ್ತಪ್ಪ ಮಾದರ ಮತ್ತಿತರರು ಉಪಸ್ಥಿತರಿದ್ದರು. ಅನಂತ ಪಪ್ಪು ವಂದಿಸಿದರು.