Belagavi News In Kannada | News Belgaum

ಪೋಸ್ಟ್‌ಮ್ಯಾನ್‍ನಿಂದಲೇ ಬಡ ಜನರ ಲಕ್ಷ, ಲಕ್ಷ ಹಣ ಗುಳುಂ

ಬಡವರು, ದಿನ ಕೂಲಿ, ನಾಲಿ ಮಾಡಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಮದುವೆ ಸೇರಿದಂತೆ ಕಷ್ಟಕ್ಕೆ ಬೇಕಾಗುತ್ತೆ ಎಂದು ಪೋಸ್ಟ್ ಆಫೀಸ್‍ಗೆ 100-200 ರೂ.ಗಳನ್ನು ಠೇವಣಿ ಕಟ್ಟುತ್ತಿದ್ರು. ಆದ್ರೆ ಜನರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್‍ ಪೋಸ್ಟ್ ಆಫೀಸ್‍ಗೆ ದುಡ್ಡು ಕಟ್ಟದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಚೆನ್ನಾಗಿ ಮಜಾ ಮಾಡಿದ್ದಾನೆ. ಈ ವಿಷಯ ತಿಳಿದ ಜನರು ತಮ್ಮ ಹಣ ವಾಪಸ್ ನೀಡುವಂತೆ ಧರಣಿ ಕುಳಿತಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಅಂಚೆಕಚೇರಿಯಲ್ಲಿ ಈ ಘಟನೆ ನಡೆದಿದೆ. ಕಷ್ಟಕಾಲಕ್ಕೆ ಆಗಲಿ ಎಂದು ಅಂಚೆ ಕಚೇರಿಯಲ್ಲಿ ಪ್ರತಿದಿನ ತಾವು ದುಡಿದ ಹಣದಲ್ಲಿ ಬಡಮಧ್ಯಮ ವರ್ಗದ ಜನ ಒಂದಿಷ್ಟು ಅಂತ ಉಳಿತಾಯ ಮಾಡಿ ಠೇವಣಿ ಮಾಡ್ತಿದ್ರು. ಅದು ನೇರವಾಗಿ ಪೋಸ್ಟ್‌ಮ್ಯಾನ್‍ ಕೈಗೆ ದುಡ್ಡು ಕೊಡುತ್ತಿದ್ರು. ಹೀಗೆ ಪೋಸ್ಟ್‌ ಮ್ಯಾನ್‍ಗೆ ಹಣ ಕಟ್ಟಿದ್ದ ಜನ ಕಷ್ಟ ಇದೆ ಅಂತ ಪೋಸ್ಟ್ ಅಫೀಸ್‍ಗೆ ಹೋಗಿ ಹಣ ಡ್ರಾ ಮಾಡುವುದಕ್ಕೆ ಹೋದ್ರೆ ಅವರಿಗೆ ಶಾಕ್ ಆಗಿದೆ.

ದಿನ ಹಣ ಕಟ್ಟುತ್ತಿದ್ರೂ ಅವರ ಖಾತೆಗಳಲ್ಲಿ ಹಣವೇ ಇರಲಿಲ್ಲ. ಅರೇ ಇದೇನಪ್ಪಾ ಅಂತ ಪೋಸ್ಟ್‌ಮ್ಯಾನ್‍ ಕರೆಸಿ ವಿಚಾರಣೆ ಮಾಡಿದಾಗ ಆಸಲಿ ಸತ್ಯ ತಿಳಿದುಬಂದಿದೆ. ಬಡವರ ಬಳಿ ದುಡ್ಡು ಪಡೀತಿದ್ದ ಪೋಸ್ಟ್‌ಮ್ಯಾನ್‍ ಇವರಿಗೆ ನಕಲಿ ಸೀಲ್ ಸಹಿ ಮಾಡಿದ ರಸೀದಿ ನೀಡಿದ್ದಾನೆ. ಈ ಹಣವನ್ನ ಪೋಸ್ಟ್ ಆಫೀಸ್‍ಗೆ ಕಟ್ಟಿಲ್ಲ. ಇದ್ರಿಂದ ಹಣ ಕಳೆದುಕೊಂಡ ಜನ ಈಗ ಅಂಚೆ ಕಚೇರಿಗೆ ಬಂದು ತಮ್ಮ ಹಣ ಕೊಡುವಂತೆ ಧರಣಿ ಕೂತಿದ್ದಾರೆ.

ಚಿಕ್ಕಬಳ್ಳಾಪುರ ನಗರ ಅಂಚೆ ಕಚೇರಿಯ ಪೋಸ್ಟ್‌ಮ್ಯಾನ್‍ ಜಯರಾಜ್ ಈ ವಂಚನೆ ಮಾಡಿದ್ದಾನೆ. ಹಲವು ದಿನಗಳಿಂದಲೂ ಜನರಿಂದ ಹಣ ಪಡೀತಿದ್ದ ಈತ ಅದನ್ನು ಪೋಸ್ಟ್ ಆಫೀಸ್‍ಗೆ ಜಮಾ ಮಾಡದೆ ತಾನೇ ಸ್ವಂತಕ್ಕೆ ಬಳಸಿಕೊಂಡು ಜನರ ದುಡ್ಡನ್ನ ದುರ್ಬಳಕೆ ಮಾಡಿಕೊಂಡಿದ್ದಾನೆ. ಇದರಿಂದ ಹಣ ಕಟ್ಟಿದವರಿಗೆ ಈಗ ದಿಕ್ಕು ತೋಚದಂತಾಗಿ ಆಕ್ರೋಶ ಹೊರಹಾಕಿದ್ದಾರೆ.

30 ಜನರ ಬಳಿ ಸರಿಸುಮಾರು 13 ಲಕ್ಷ ಹಣವನ್ನ ಸ್ವಂತಕ್ಕೆ ಬಳಸಿಕೊಂಡಿರೋ ಬಗ್ಗೆ ಜಯರಾಜ್ ತಪ್ಪೊಪ್ಪಿಕೊಂಡಿದ್ದಾನೆ. ತನ್ನ ಜಮೀನು ಮಾರಿ ಹಣ ವಾಪಾಸ್ ಮಾಡುವ ಬಗ್ಗೆಯೂ ಭರವಸೆ ನೀಡಿದ್ದಾನೆ. ಇತ್ತ ವಂಚನೆ ಮಾಡಿದ ಜಯರಾಜ್‌ನನ್ನು ಇಲಾಖೆ ಅಮಾನತು ಮಾಡಿದ್ದು, ತಮ್ಮ ದುಡ್ಡು ಅದ್ಯಾವಾಗ ಸಿಗುತ್ತೋ ಇಲ್ವೋ ಅಂತ ಬಡ ಜನರು ಅಂಚೆ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿ ಹಣಕ್ಕಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ.