Belagavi News In Kannada | News Belgaum

ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ನ ಒಂದೇ ಒಂದು ಸಿನಿಮಾ ಕೂಡ ರಿಲಿಸ್ ಆಗಿಲ್ಲ. ಮೂರು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರೂ, ಒಂದೇ ಒಂದು ಖಾತೆ ಕೂಡ ತೆರೆದಿಲ್ಲ. ಆದರೆ, ಸಾಕಷ್ಟು ಅಭಿಮಾನಿಗಳನ್ನು ಅವರು ಸಂಪಾದನೆ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ನಿನ್ನೆ ಮುಂಬೈಗೆ ಅವರು ಬಂದಿಳಿದಾಗ ಮುತ್ತಿಕೊಂಡ ಅಭಿಮಾನಿಗಳ ಗುಂಪು.

ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಮನಾಲೆಯಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ಆ ಚಿತ್ರೀಕರಣದಲ್ಲಿ ಅವರು ಪಾಲ್ಗೊಂಡಿದ್ದರು. ಸಣ್ಣದೊಂದು ಶೆಡ್ಯೂಲ್ ಮುಗಿಸಿದ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಂಬೈಗೆ ವಾಪಸ್ಸಾಗಿದೆ.

ಶೂಟಿಂಗ್ ನಲ್ಲಿ ಪಾಲ್ಗೊಂಡು ಹೈರಾಣಾಗಿದದ್ ರಶ್ಮಿಕಾ ಮಂದಣ್ಣ ರಿಲ್ಯಾಕ್ಸ್ ಗಾಗಿ ರೆಸ್ಟೋರೆಂಟ್ಗೆ ಹೋಗಿದ್ದಾರೆ. ಅಲ್ಲಿಂದ ಆಚೆ ಬರುವಾಗ ನೂರಾರು ಅಭಿಮಾನಿಗಳೂ ರಶ್ಮಿಕಾ ಅವರನ್ನು ಮುತ್ತಿಕೊಂಡಿದ್ದಾರೆ. ಸೆಲ್ಫಿಗಾಗಿ ಕೇಳಿಕೊಂಡಿದ್ದಾರೆ. ನಗುತ್ತಲೇ ಎಲ್ಲರಿಗೂ ಸೆಲ್ಫಿಕೊಟ್ಟಿರುವ ಅವರು, ಅಭಿಮಾನಿಗಳ ಜತೆ ಕೆಲ ಕಾಲ ಕಳೆದಿದ್ದಾರೆ.

ಕನ್ನಡ ಸಿನಿಮಾ ರಂಗದಿಂದಲೇ ಚಿತ್ರೋದ್ಯಮಕ್ಕೆ ಕಾಲಿಟ್ಟ ರಶ್ಮಿಕಾ, ಮೊದಲ ಸಿನಿಮಾದಲ್ಲೇ ಭಾರೀ ಸಕ್ಸಸ್ ಪಡೆದರು. ಆನಂತರ ಕನ್ನಡದ ಹಲವು ಸ್ಟಾರ್ ನಟರ ಜತೆ ನಟಿಸಿದರು. ಅಲ್ಲಿಂದ ತೆಲುಗು ಸಿನಿಮಾ ರಂಗಕ್ಕೆ ಹಾರಿದರು. ತೆಲುಗಿನಿಂದ ತಮಿಳಿನಲ್ಲೂ ಅನೇಕ ಚಿತ್ರಗಳನ್ನು ಮಾಡಿದರು. ಇತ್ತೀಚೆಗಷ್ಟೇ ತೆರೆ ಕಂಡ ಪುಷ್ಪಾ ಸಿನಿಮಾದ ಮೂಲಕ ನ್ಯಾಷಿನಲ್ ಕ್ರಶ್ ಆಗಿ ರೂಪಗೊಂಡರು. ಇದೀಗ ಬಾಲಿವುಡ್ ನಲ್ಲೂ ರಶ್ಮಿಕಾ ತಮ್ಮ ಛಾಪು ಮೂಡಿಸುತ್ತಿದ್ದಾರೆ.