Belagavi News In Kannada | News Belgaum

ನೂತನ ಸಾಲಿನಲ್ಲಿ ಕೆಎಂಎಫ್ ಒಟ್ಟಾರೆ 25 ಸಾವಿರ ಕೋಟಿ ವಹಿವಾಟು ತಲುಪುವ ಗುರಿಯಿದೆ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರತಿ ಲೀ. ಹಾಲಿಗೆ 3 ರೂ. ಹೆಚ್ಚಳ ಮಾಡುವಂತೆ ಸಿಎಂಗೆ ಮನವಿ ಮಾಡಿಕೊಂಡ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ವೆಚ್ಚಗಳು ಶೇ. 30ರಷ್ಟು ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಂಗಳವಾರ ಸಂಜೆ ಸುದ್ಧಿ ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ.ಗಳನ್ನು ಹೆಚ್ಚಿಗೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಅವರು ಕೋರಿದ್ದಾರೆ.

ಅಮೂಲ್ ಸೇರಿದಂತೆ ದೇಶದ ವಿವಿಧ ಸಹಕಾರ ಮತ್ತು ಖಾಸಗಿ ಸಂಸ್ಥೆಗಳ ಹಾಲಿನ ಮಾರಾಟ ದರವನ್ನು ಈಗಾಗಲೇ ಹೆಚ್ಚಿಸಿದ್ದು, ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ ಲೀಟರ್‍ಗೆ ರೂ. 8 ರಿಂದ 10 ರೂ.ಗೆ ಹೆಚ್ಚಳವಾಗಿದೆ. ಹಾಲಿನ ಮಾರಾಟ ದರವು ಕನಿಷ್ಠ ಪ್ರತಿ ಲೀಟರಗೆ 3 ರೂ. ಹೆಚ್ಚಿಸಲು ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಹೆಚ್ಚಳ ಮಾಡಲಿರುವ 3 ರೂ.ಗಳಲ್ಲಿ ಕನಿಷ್ಠ ರೂ. 2ನ್ನು ಹಾಲು ಉತ್ಪಾದಕರಿಗೆ ಮತ್ತು ಉಳಿದ 1 ರೂ.ನ್ನು ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕೆಎಂಎಫ್ ಹಾಗೂ ರಾಜ್ಯದಲ್ಲಿರುವ ಎಲ್ಲ 14 ಹಾಲು ಒಕ್ಕೂಟಗಳ ಒಟ್ಟಾರೆ ವಹಿವಾಟು 2019-20 ರಲ್ಲಿ 16,440.74 ಕೋಟಿ ರೂ. ಇದ್ದು, ಪ್ರಸಕ್ತ ಸಾಲಿಗೆ 19,732 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. 2 ವರ್ಷಗಳ ಅವಧಿಯಲ್ಲಿ ಶೇ. 20ರಷ್ಟು ವಹಿವಾಟು ಹೆಚ್ಚಳವಾಗಿದ್ದು, 2022-23ನೇ ಸಾಲಿನಲ್ಲಿ ಒಟ್ಟಾರೆ 25 ಸಾವಿರ ಕೋಟಿ ರೂ. ತಲುಪುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ ಕೆಎಂಎಫ್‍ನಿಂದ ನೀಡಲಾಗುತ್ತಿರುವ ಅನುದಾನವನ್ನು 3.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. 2020-21ನೇ ಸಾಲಿನಲ್ಲಿ 250 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು 10.57 ಕೋಟಿ ರೂ. ಅನುದಾನ ನೀಡಲಾಗಿದ್ದು, 2021-22ನೇ ಸಾಲಿನಲ್ಲಿ 15.15 ಕೋಟಿ ರೂ.ಗಳ ಅನುದಾನವನ್ನು ಇದಕ್ಕೆ ತೆಗೆದಿರಿಸಲಾಗಿದೆ ಎಂದು ಅವರು ಹೇಳಿದ್ದಾರೆ.