Belagavi News In Kannada | News Belgaum

ಕೃಷಿ ವಿಜ್ಞಾನ ಕೇಂದ್ರದಿಂದ “ರೈತರ ಪಾಲ್ಗೊಳ್ಳುವಿಕೆ-ನಮ್ಮ ಪ್ರಥಮ ಆದ್ಯತೆ” ಅಭಿಯಾನ

ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರದಿಂದ   “ರೈತರ ಪಾಲ್ಗೊಳ್ಳುವಿಕೆ-ನಮ್ಮ ಪ್ರಥಮ ಆದ್ಯತೆ” ಅಭಿಯಾನ
ಐಸಿಎಆರ್-ಕೆಎಲ್‍ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ, ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆ, ಇಂದೋರ್, ಆತ್ಮ ಯೋಜನೆ, ಕೃಷಿ ಇಲಾಖೆ, ಬೆಳಗಾವಿ ಹಾಗೂ ಹಾಗೂ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯ, ಹೈದರಾಬಾದ್ ಇವರ ಸಹಯೋಗದಲ್ಲಿ “ರೈತರ ಪಾಲ್ಗೊಳ್ಳುವಿಕೆ-ನಮ್ಮ ಪ್ರಥಮ ಆದ್ಯತೆ” ಅಭಿಯಾನವನ್ನು ಮತ್ತಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ ಬಿ. ಆರ್. ಪಾಟೀಲ ಸ್ವಾಗತಿಸಿ ಮಾತನಾಡಿ, ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಯಲ್ಲಿ ಕೃಷಿ ವ್ಯವಸ್ಥೆಯನ್ನು ಮುಖ್ಯವಾಹಿನಿಗೆ ತರಲು “ರೈತರ ಪಾಲ್ಗೊಳ್ಳುವಿಕೆ-ನಮ್ಮ ಪ್ರಥಮ ಆದ್ಯತೆ” ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ, ಈ ಅಭಿಯಾನದ ಭಾಗವಾಗಿ ಕೃಷಿ ವಿಜ್ಞಾನ ಕೇಂದ್ರವು ಇಂದು ಭಾರತೀಯ ನೈಸರ್ಗಿಕ ಕೃಷಿ ಪದ್ಧತಿ, ಎಣ್ಣೆಕಾಳು ಹಾಗೂ ಸಿರಿಧಾನ್ಯಗಳ ಕುರಿತು ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರವಮನ್ನು ಏರ್ಪಡಿಸಿದ್ದು, ರೈತರು ಕಾರ್ಯಕ್ರಮದ ಲಾಭ ಪಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಿತ್ತೂರ ಮತಕ್ಷೇತ್ರದ ಶಾಸಕರಾದ ಶ್ರೀ ಮಹಾಂತೇಶ ದೊಡಗೌಡರ ನೆರವೇರಿಸಿದರು ಮತ್ತು ರೈತರನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚೆಗೆ ಗುಣಮಟ್ಟದ ಆಹಾರಕ್ಕೆ ಜಗತ್ತಿನಾದ್ಯಂತ ಜಾಗೃತಿ ಹೆಚ್ಚಾಗುತ್ತಿದ್ದು, ಹೆಚ್ಚು ಪೋಷಕಾಂಶಗಳನ್ನೊಳಗೊಂಡ ಬೆಳೆಗಳಿಗೆ ಮಹತ್ವ ಬರುತ್ತಿದೆ. ಈ ನಿಟ್ಟಿನಲ್ಲಿ ಹೇರಳವಾಗಿ ಅತ್ಯವಶ್ಯಕ ಪೋಷಕಾಂಶಗಳನ್ನು ಒಳಗೊಂಡ ಬೆಳೆಗಳಾದ ಸಿರಿಧಾನ್ಯ ಬೆಳೆÀಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದೇರೀತಿ ಅಧಿಕ ರಾಸಾಯನಿಕ ಗೊಬ್ಬರ ಬಳಕೆಯಿಂದ ಮನುಕುಲವು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರವು ರಾಸಾಯನಿಕ ಮುಕ್ತ ಕೃಷಿ ಹಾಗೂ ಸಿರಿಧಾನ್ಯ ಬೆಳೆ ಉತ್ಪಾದನೆ ಹಾಗೂ ಅವುಗಳ ಮೌಲ್ಯವರ್ಧನೆ ಕುರಿತು ರೈತರಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದ್ದು ರೈತರು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಸ್ಯ ತಳಿಗಳ ಸಂರಕ್ಷಣೆ ಹಾಗೂ ರೈತರ ಹಕ್ಕುಗಳ ಪ್ರಾಧಿಕಾರದ ಹಿಂದಿನ ಅಧ್ಯಕ್ಷರು ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಆರ್. ಆರ್. ಹಂಚಿನಾಳ ಪ್ರಾಸ್ತಾವಿಕ ಮಾತನಾಡಿ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಖಾದ್ಯ ತೈಲವನ್ನು ಪೂರೈಸಲು ಸುಮಾರು 75,000 ಕೋಟಿ ಮೊತ್ತದ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಖಾದ್ಯ ತೈಲದ ಆಮದನ್ನು ಕಡಿಮೆ ಮಾಡಲು ಅಧಿಕ ಇಳುವರಿ ನೀಡುವ ಎಣ್ಣೆಕಾಳು ಬೆಳೆಗಳ ತಳಿಗಳನ್ನು ಅಳವಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಸೋಯಾಬೀನ್ ಸುಧಾರಿತ ತಳಿಗಳ ಬೀಜೋತ್ಪಾದನೆ ಕೈಗೊಂಡು ಗುಣಮಟ್ಟದ ಬೀಜಗಳನ್ನು ರೈತರಿಗೆ ಪೂರೈಸಲಾಗುತ್ತಿದೆ ಎಂದರು.

ಹೈದರಾಬಾದ್‍ನ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕÀ ಡಾ. ಕೆ. ಮನೋಹರನ್ ಮಾತನಾಡಿ, ಕೃಷಿ ಮಂತ್ರಾಲಯದಿಂದ ಎಣ್ಣೆಕಾಳು ಅಭಿವೃದ್ಧಿಗೋಸ್ಕರ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಅದೇರೀತಿ ಇಂದೋರನ ಐಸಿಎಆರ್-ಭಾರತೀಯ ಸೋಯಾಅವರೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿಯಾದ ಡಾ. ಜಿ. ಕೆ. ಸಾತಪುತೆಯವರು ಸೋಯಾಅವರೆ ಅಧಿಕ ಇಳುವರಿ ನೀಡುವ ಸೋಯಾಬೀನ್ ತಳಿಗಳ ಪರಿಚಯ ನೀಡಿದರು.

ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಯೋಜನಾ ನಿರ್ದೇಶಕರು (ಆತ್ಮ ಯೋಜನೆ) ಶ್ರೀ ಎಸ್. ಎಸ್. ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯ ಕೃಷಿಯಲ್ಲಿನ ಸಾಧಕ ಬಾಧಕಗಳ ಬಗ್ಗೆ ಹಾಗೂ ಸೋಯಾಅವರೆಯ ಉತ್ಪಾದಕತೆಯಲ್ಲಿ ಬರುವ ಅಡೆತಡೆಗಳ ಬಗ್ಗೆ ಚರ್ಚಿಸಿ ಕೃಷಿ ಇಲಾಖೆಯು ಮುಂಗಾರಿಗೆ ಬೇಕಾಗುವ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.

ಬೆಳಗಾವಿ ಉಪ ಕೃಷಿ ನಿರ್ದೇಶಕರಾದ ಶ್ರೀ ಹೆಚ್. ಡಿ. ಕೋಳೇಕರ ಮಾತನಾಡಿ, ಮಾತನಾಡಿ, ಕೃಷಿಯಲ್ಲಿ ಹೆಚ್ಚು ಲಾಭಗಳಿಸಬೇಕಾದರೆ ರೈತರು ಇಂತಹ ಅಭಿಯಾನದಲ್ಲಿ ಪಾಲ್ಗೊಂಡು ನೂತನ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಬಳಸಲು ಕಿವಿಮಾತು ನೀಡಿದರು.

ತಾಂತ್ರಿಕ ಅಧಿವೇಶನದಲ್ಲಿ ಹೈದರಾಬಾದ್‍ನ ಎಣ್ಣೆಕಾಳು ಅಭಿವೃದ್ಧಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕÀ ಶ್ರೀ ಎಸ್. ಎಸ್. ಕಾಗಿ ಎಣ್ಣೆಕಾಳು ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಶ್ರೀ ಜಿ. ಬಿ. ವಿಶ್ವನಾಥ, ಸೋಯಾಬೀನ್ ಉತ್ಪಾದನಾ ತಾಂತ್ರಿಕತೆಗಳ ಕುರಿತು, ಡಾ. ಎಸ್. ಎಸ್. ಹಿರೇಮಠ, ಸಮಗ್ರ ರೋಗ ಕೀಟ ನಿರ್ವಹಣೆ ಕುರಿತು, ಶ್ರೀಮತಿ ಶ್ರೀದೇವಿ ಬ. ಅಂಗಡಿ ಸೋಯಾಬೀನ್ ಮೌಲ್ಯವರ್ಧನೆ ಕುರಿತು ಹಾಗೂ ಶ್ರೀ ಎಸ್. ಎಮ್. ವಾರದ ನೈಸರ್ಗಿಕ ಕೃಷಿಯ ಕುರಿತು ರೈತರಿಗೆ ಮಾಹಿತಿ ನೀಡಿ ಚರ್ಚಿಸಿದರು.

ಕೇಂದ್ರದ ವಿಜ್ಞಾನಿ ಪ್ರವೀಣ ಯಡಹಳ್ಳಿ ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದ ಭಾಗವಾಗಿ ಕೃಷಿ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ 350 ಕ್ಕೂ ಹೆಚ್ಚು ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.